ಪೂರ್ವ ಗೋದಾವರಿ(ಆಂಧ್ರ ಪ್ರದೇಶ): ವ್ಯಕ್ತಿಯೊಬ್ಬ ಈಗಾಗಲೇ ಮೂರು ಮದುವೆ ಆಗಿದ್ದ ಭೂಪ ನಾಲ್ಕನೇ ಮದುವೆಗೆ ಮುಂದಾಗಿ ಪತ್ರಿಕಾ ಪ್ರಕಟಣೆ ನೀಡಿದಾಗ ತಗಲಾಕ್ಕೊಂಡಿರುವ ಘಟನೆ ದ್ರಾಕ್ಷಾರಾಮದಲ್ಲಿ ನಡೆದಿದೆ.
ವಿಶಾಖಪಟ್ಟಣಂ ಡಾಕ್ಯಾರ್ಡ್ ಉದ್ಯೋಗಿ ವಾಸಂಶೆಟ್ಟಿ ವಿಷ್ಣು ಜೊತೆ ಪೂರ್ವ ಗೋದಾವರಿ ಜಿಲ್ಲೆಯ ತಾಳ್ಲಪಾಲಂ ಗ್ರಾಮದ ಲಕ್ಷ್ಮಿಸರೋಜಾ 1998ರಲ್ಲಿ ಮದುವೆಯಾಗಿದ್ದರು. ಈ ಸಮಯದಲ್ಲಿ 5 ಲಕ್ಷ ನಗದು, 1 ಲಕ್ಷ ರೂ. ಮೌಲ್ಯದ ಒಡವೆಗಳನ್ನು ವರದಕ್ಷಿಣೆ ರೂಪದಲ್ಲಿ ಕೊಡಲಾಗಿತ್ತಂತೆ.
ವಿಷ್ಣುವಿಗೆ ಇದು ಮೂರನೇ ಮದುವೆ ಎಂಬ ವಿಚಾರ ನನಗೆ ತಿಳಿದಿಲ್ಲ. ಮಕ್ಕಳಾಗುವುದಿಲ್ಲ ಎಂದು ಅರಿತ ನಾವು ಗಂಡು ಮಗವೊಂದನ್ನು ಸಾಕುತ್ತಿದ್ದೇವೆ. ಆದ್ರೆ ಇತ್ತೀಚೆಗೆ ನಿವೃತ್ತಿ ಹೊಂದಿದ ನನ್ನ ಪತಿ ಕನಿಷ್ಠ ಅವಶ್ಯಕತೆಗಳನ್ನು ಸಹ ಪೂರೈಸುತ್ತಿಲ್ಲ. ಅಲ್ಲದೆ, ನನ್ನನ್ನು ಮನೆಯಿಂದ ಹೊರ ದೂಡಿದರು. ಹೀಗಾಗಿ ನಾನು ನನ್ನ ತವರು ಮನೆಯಲ್ಲೇ ವಾಸಿಸುತ್ತಿದ್ದೇನೆ ಎಂದು ನೊಂದ ಮಹಿಳೆ ಪೊಲೀಸ್ ಠಾಣೆಗೆ ಮೆಟ್ಟಿಲೇರಿದ್ದಾಳೆ.
ಕಳೆದ ತಿಂಗಳು 23ಕ್ಕೆ ನನ್ನ ಗಂಡ ಮನೆಗೆ ಬಂದು ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಬೆದರಿಕೆಯೊಡ್ಡಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದು ವಿವಾಹ ಮಾಡಿಕೊಳ್ಳುವುದಾಗಿ ಪತ್ರಿಕಾ ಪ್ರಕಟಣೆ ಸಹ ನೀಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆ ಕುರಿತು ದ್ರಾಕ್ಷಾರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.