ಕೃಷ್ಣಗಿರಿ(ತಮಿಳುನಾಡು): ತಮಿಳುನಾಡಿನ ಕೃಷ್ಣಗಿರಯಲ್ಲಿ ವ್ಯಕ್ತಿಯೋರ್ವ, ಮಹಿಳೆಗೆ ಚಾಕುವಿನಿಂದ ಇರಿದಿದ್ದ, ಈ ವೇಳೆ ಚಾಕು ಸಂಪೂರ್ಣವಾಗಿ ಮಹಿಳೆಯ ಎದೆ ಹೊಕ್ಕಿತ್ತು. ಆದರೂ ಮಹಿಳೆ, ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಕಳೆದ ಮೇ 25 ರಂದು ವ್ಯಕ್ತಿಯೋರ್ವ, ಮಲ್ಲಿಕಾ ಎಂಬ ಮಹಿಳೆಗೆ ಚಾಕುವಿನಿಂದ ಇರಿದಿದ್ದ. ಇರಿದ ರಭಸಕ್ಕೆ ಚಾಕು ಸಂಪೂರ್ಣವಾಗಿ ಮಹಿಳೆಯ ಎದೆ ಹೊಕ್ಕಿದೆ. ಆಕೆ ಸತ್ತಿರಬಹುದೆಂದು ಭಾವಿಸಿ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಬೆಳಗ್ಗೆವರೆಗೂ ಮಹಿಳೆ ಎಚ್ಚರವಿಲ್ಲದೆ ಮನೆಯಲ್ಲೆ ಬಿದ್ದಿದ್ದಾಳೆ. ಮರುದಿನ ಮೇ 26 ರಂದು ಮಹಿಳೆಯನ್ನು ಸೇಲಂ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಅಲ್ಲಿ ಸೂಕ್ತ ಚಿಕಿತ್ಸೆ ಸಿಗದ ಕಾರಣ ಕೊಯಮತ್ತೂರಿಗೆ ಕರೆದುಕೊಂಡು ಹೋಗಲು ತಿಳಿಸಿದ್ದಾರೆ.
ಮೇ 27ರ ಬೆಳಗ್ಗೆ ಮಹಿಳೆಯನ್ನು ಕೊಯಮತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಸುಮಾರು 30 ಗಂಟೆ ಕಳೆದರೂ ಚಾಕು ಮಹಿಳೆಯ ಎದೆಯಲ್ಲೇ ಇತ್ತು. ಕೊಯಮತ್ತೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯರು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಚಾಕು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರು.
ಆರು ಇಂಚುಗಳಿಗಿಂತ ಹೆಚ್ಚು ಉದ್ದವಿದ್ದ ಚಾಕುವಿನ ತುದಿ ಅದೃಷ್ಟವಶಾತ್ ಶ್ವಾಸಕೋಶದ ಒಂದು ಸಣ್ಣ ಭಾಗವನ್ನು ಮಾತ್ರ ಚುಚ್ಚಿತ್ತು. ಹೃದಯದ ಯಾವುದೇ ಭಾಗಕ್ಕೆ ಗಾಯವಾಗಿರಲಿಲ್ಲ. ಹೀಗಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಸಂಪೂರ್ಣವಾಗಿ ಗುಣಮುಖವಾದ ಮಹಿಳೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.