ಮುಂಬೈ : ಬಾಲಕನೋರ್ವ ಲಿಫ್ಟ್ನಲ್ಲಿ ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆ ಧಾರಾವಿಯ ಶಾಹು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲ್ವಾಡಿ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದೆ.
ಮೊಹಮ್ಮದ್ ಹುಝೈಫಾ ಸರ್ಫರಾಝ್ ಶೇಖ್ (5) ಮೃತ ಬಾಲಕ. ಈತ ತನ್ನ 7 ವರ್ಷದ ಸಹೋದರಿ ಮತ್ತು 3 ವರ್ಷದ ಸಹೋದರನ ಜೊತೆ, ತಾವು ವಾಸಿಸುತ್ತಿದ್ದ ಕಟ್ಟಡದ ಲಿಫ್ಟ್ ಏರಿದ್ದ. ಹೀಗೆ ಲಿಫ್ಟ್ ಏರಿದ ಮೂವರು ಮಕ್ಕಳು ಕಟ್ಟಡದ ಕೆಳ ಮಹಡಿಗೆ ತಲುಪುತ್ತಾರೆ. ಈ ವೇಳೆ ಲಿಫ್ಟ್ ನ ಬಾಗಿಲು ತೆರೆಯುತ್ತದೆ. ಇಬ್ಬರು ಮಕ್ಕಳು ಹೊರ ಹೋಗುತ್ತಾರೆ. ಆದರೆ ಹುಝೈಫಾ ಮಾತ್ರ ಲಿಫ್ಟ್ನ ಕಬ್ಬಿಣದ ಗ್ರಿಲ್ ಮತ್ತು ಮರದ ಬಾಗಿಲ ಮಧ್ಯೆ ಸಿಲುಕಿಕೊಳ್ಳುತ್ತಾನೆ. ಬಾಲಕ ಹುಝೈಫಾ ಬಾಗಿಲು ತೆರೆದು ಹೊರ ಹೋಗಲು ಪ್ರಯತ್ನಿಸಿದರೂ, ಅಷ್ಟೊತ್ತಿಗಾಗಲೇ ಲಿಫ್ಟ್ ಚಾಲನೆಗೊಂಡಿತ್ತು. ಹೀಗಾಗಿ ಹುಝೈಫಾ ಹೊರ ಬರಲಾಗದೆ, ಲಿಫ್ಟ್ ಒಳಗಡೆ ಸಿಲುಕಿ ದಾರುಣವಾಗಿ ಕೊನೆಯುಸಿರೆಳೆದಿದ್ದಾನೆ. ಘಟನೆಯ ದೃಶ್ಯ ಲಿಫ್ಟ್ ಒಳಗಡೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಂಬೈನ ಸಿಯಾನ್ ಆಸ್ಪತ್ರೆ ವೈದ್ಯಾಧಿಕಾರಿ ಬಾಲಕನ ಪರೀಕ್ಷೆ ನಡೆಸಿ ಮೃತಪಟ್ಟಿದ್ದಾಗಿ ಘೋಷಿಸಿದ್ದಾರೆ. ಘಟನೆಗೆ ಲಿಫ್ಟ್ನ ಯಾವುದೇ ತಾಂತ್ರಿಕ ದೋಷ ಕಾರಣವಲ್ಲ, ಇದೊಂದು ಆಕಸ್ಮಿಕ ಘಟನೆಯೆಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಉಪ ಪೊಲೀಸ್ ಇನ್ಸ್‌ಪೆಕ್ಟರ್ ಸಂದೀಪ್ ಸಾವಂತ್ ಮತ್ತು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಲಾಸ್ ಗಂಗವಾನೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.