ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೆ.ಕೆ.ಲಾನ್ ಆಸ್ಪತ್ರೆಯಲ್ಲಿ (JK Lon Hospital) ಒಂದೇ ತಿಂಗಳಲ್ಲಿ 100 ಕಂದಮ್ಮಗಳು ಸಾವಿಗೀಡಾಗಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯಾಗುತ್ತಿದೆ.
ಕಳೆದ 3 ದಿನಗಳಲ್ಲಿ 9 ಹಸುಳೆಗಳು ಸಾವಿಗೀಡಾಗಿದ್ದು ಡಿಸೆಂಬರ್ ತಿಂಗಳಲ್ಲ ಸಾವಿನ ಸಂಖ್ಯೆ 100ಕ್ಕೆ ಏರಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಲು ವಿಶೇಷ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 23-24ರಲ್ಲೇ 2 ದಿನದಲ್ಲಿ 10 ನವಜಾತ ಶಿಶುಗಳು ಸಾವಿಗೀಡಾದ ಪ್ರಕರಣ ನಡೆದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಸ್ಪತ್ರೆ ಆಡಳಿತ ಸಿಬ್ಬಂದಿ, ಜನಿಸಿದ ಬಹುಪಾಲು ಶಿಶುಗಳು ಕಡಿಮೆ ತೂಕದ ಕಾರಣ ಸಾವನ್ನಪ್ಪಿವೆ ಎಂದಿದೆ.
ಇನ್ನು ಆಸ್ಪತ್ರೆಯಲ್ಲಿ ಜೀವ ರಕ್ಷಕ ಉಪಕರಣಗಳ ಕೊರತೆ ಇದೆ ಎಂಬ ಆರೋಪ ಕೇಳಿಬಂದಿದೆ. ಆಸ್ಪತ್ರೆಗೆ ಬಿಜೆಪಿ ಸಂಸದೀಯ ತಂಡ ಭೇಟಿ ನೀಡಿದ್ದು, ಒಂದೇ ಬೆಡ್ ಮೇಲೆ ಮೂರರಿಂದ ನಾಲ್ಕು ಮಕ್ಕಳನ್ನು ಮಲಗಿಸಲಾಗಿತ್ತು. ಅಲ್ಲದೇ ಸಿಬ್ಬಂದಿ ಕೊರತೆ ಕೂಡ ಆಸ್ಪತ್ರೆಯಲ್ಲಿ ಕಾಣುತ್ತಿದೆ ಎಂದು ಹೇಳಿದೆ.