ಹೈದರಾಬಾದ್: ಭಾರೀ ಮಳೆಗೆ 80 ವರ್ಷದ ಹಳೆಯ ಭವನವೊಂದು ಕುಸಿದು ಬಿದ್ದು, ವಧು ಮತ್ತು ಆಕೆಯ ಅತ್ತಿಗೆ ಸಾವನ್ನಪ್ಪಿರುವ ಘಟನೆ ಹಳೇ ಹೈದರಾಬಾದ್ ನಗರದ ಹುಸೇನ್ ಆಲಂ ಪ್ರದೇಶದಲ್ಲಿ ನಡೆದಿದೆ.
ಹೌದು, ಏಳೆಂಟು ತಿಂಗಳ ಹಿಂದೆ 18 ವರ್ಷದ ಯುವತಿ ಅನೀಸ್ ಬೇಗಂನ ಮದುವೆ ನಿಶ್ಚಿಯವಾಗಿತ್ತು. ಕೊರೊನಾ ಪರಿಣಾಮ ಮದುವೆ ಮುಂದೂಡಲಾಗಿತ್ತು. ಕೊನೆಗೂ ಅನೀಸ್ ಬೇಗಂನ ಮದುವೆ ಇದೇ ತಿಂಗಳು 19ರಂದು ನಡೆಸಬೇಕೆಂದು ಕುಟುಂಬಸ್ಥರು ನಿರ್ಧರಿಸಿದ್ದರು. ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿತ್ತು. ಆದ್ರೆ ವಧುವಿನ ಪಾಲಿಗೆ ಮಳೆರಾಯ ಯಮನ ಸ್ವರೂಪ ಪಡೆದು ಬಲಿ ಪಡೆದಿದ್ದಾನೆ.
ಭಾರೀ ಮಳೆ-ಗಾಳಿಗೆ ಹಳೆ ಕಟ್ಟಡ ಕುಸಿದು ಬಿದ್ದಿದ್ದರಿಂದ ಅನೀಸ್ ಬೇಗಂ ಸೇರಿದಂತೆ 22 ವರ್ಷದ ಆಕೆಯ ಅತ್ತಿಗೆ ಫರಾ ಬೇಗಂ ಸಹ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮನೆ ಮಾಲೀಕ ಹಾಜಿ ಮಹಮ್ಮದ್ ಖಾನ್ (54) ಆತನ ಹೆಂಡ್ತಿ ಪರ್ವೀನ್ ಬೇಗಂ, ಮಗ ಅಮ್ಜದ್ ಖಾನ್ ಮತ್ತು ಇಬ್ಬರು ಮೊಮ್ಮಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.