ನವದೆಹಲಿ : ಬಿಹಾರದಲ್ಲಿಮಹಾಘಟಬಂಧನ್ ಮಣಿಸಿ ಮತ್ತೆ ಅಧಿಕಾರದ ಗದ್ದುಗೆ ಏರಿರೋ ಎನ್ಡಿಎ ಮೈತ್ರಿಕೂಟ ಸರ್ಕಾರದಲ್ಲಿ ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಎಂಟು ಮಂತ್ರಿಗಳು ಅಪರಾಧ ಪ್ರಕರಣಗಳನ್ನು ಎದುರುಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತಮ್ಮ ವಿರುದ್ಧ ಅಪರಾಧ ಪ್ರಕರಣಗಳಿವೆ ಎಂದು ನಾಮಪತ್ರ ಸಲ್ಲಿಸುವ ವೇಳೆ ತಾವು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿರುವುದಾಗಿ (ಎಡಿಆರ್) ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆ (ಬಿಹಾರ ಚುನಾವಣಾ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ವರದಿ ತಿಳಿಸಿದೆ.
ಚುನಾವಣೆಯಲ್ಲಿ ಜಯಗಳಿಸಿದ 14 ಮಂತ್ರಿಗಳ ಅಫಿಡವಿಟ್‌ಗಳನ್ನು ಪರಿಶೀಲಿಸಿದ್ದು, ಈ ಪೈಕಿ ಆರು (ಶೇ. 43) ಮಂತ್ರಿಗಳು ತಮ್ಮ ವಿರುದ್ಧ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ಇವೆ ಎಂದು ಘೋಷಿಸಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿಯುನಲ್ಲಿ ತಲಾ ಇಬ್ಬರು, ಹೆಚ್ಎಂಎಂ ಮತ್ತು ವಿಐಪಿ ತಲಾ ಒಬ್ಬರು ಈ ರೀತಿಯ ಪ್ರಕರಣಗಳನ್ನು ಎದುರಿಸುತ್ತಿವುದಾಗಿ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
14 ಮಂತ್ರಿಗಳು ತಾವು ಚುನಾವಣೆಗೂ ಮುನ್ನ ಸಲ್ಲಿಸಿರುವ ಅಫಿಡವಿಟ್ಗಳ ಆಧಾರದ ಮೇಲೆ ಈ ಶೋಧನೆ ಮಾಡಲಾಗಿದೆ ಎಂದು ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. 14 ಮಂತ್ರಿಗಳು ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಮೈತ್ರಿಕೂಟಕ್ಕೆ ಕೈಜೋಡಿಸಿದವರು ಅನ್ನೋದು ಕುತೂಹಲಕಾರಿ ಸಂಗತಿಯಾಗಿದೆ.
ಹಿಂದೂಸ್ತಾನ್ ಆವಂ ಮೋರ್ಚಾ ಸಂಸ್ಥಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಅವರ ಹೆಚ್ಎಂಎಂ ಮತ್ತು ಬಾಲಿವುಡ್ ಸೆಟ್ ಡಿಸೈನರ್ ಮುಖೇಶ್ ಸಹಾನಿಯ ಅವರ ವಿಕಾಶೀಲ್ ಇನ್ಸಾನ್ ಪಕ್ಷದಿಂದ ತಲಾ ಒಬ್ಬರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ 125 ಸ್ಥಾನಗಳನ್ನು (243 ಸದಸ್ಯ ಬಲ) ಗೆದ್ದು ಸರಳ ಬಹುಮತ ಪಡೆದಿದೆ. ಆರ್ಜೆಡಿ ನೇತೃತ್ವದ ಮಹಾಘಟಬಂಧನ್ 110 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.