ಗರಿಯಾಬಂದ್: ಯಾವುದೇ ಧರ್ಮ ತೆಗೆದುಕೊಂಡರೂ ಮದುವೆಗೆ ಅದರದ್ದೇ ಆದ ಅರ್ಥವಿದೆ, ಮಹತ್ವವಿದೆ. ಮದುವೆ ಎರಡು ಜೀವಿಗಳು ಬಾಂಧವ್ಯದ ಸಂಕೇತ. ಒಬ್ಬಂಟಿಯಾಗಿ ಸಾಗುವ ಹಾದಿಯಲ್ಲಿ ಮತ್ತೊಬ್ಬರನ್ನು ಜಂಟಿಯಾಗಿ ಮಾಡುವ ಕ್ಷಣವೇ ವಿವಾಹ ಬಂಧನ. ಪ್ರೀತಿ ಮತ್ತು ಮದುವೆ ಒಂದೇ ನಾಣ್ಯದ ಎರಡು ಮುಖಗಳು. ಆದರೆ, ಈ ಮದುವೆ ಸಾಮಾನ್ಯ ಮದುವೆಗಿಂತ ತುಸು ಭಿನ್ನ- ವಿಭಿನ್ನ.
ಚತ್ತೀಸಗಢ್ನ ಗರಿಯಾಬಂದ್ ಸಮೀಪದ ಜಾದಪದರ್ ಗ್ರಾಮದ 70 ವರ್ಷದ ವರ 65 ವರ್ಷದ ವಧು ಪರಸ್ಪರ ಪ್ರೀತಿಸಿ ಅಕ್ಷಯ ತೃತೀಯ ದಿನದಂದು ಹಸಿಮಣೆ ಏರಿದ್ದಾರೆ. 70 ವರ್ಷ ವಯಸ್ಸಿನ ರಾಮ್ ನೇತಮ್ ಅವರು ಮದುವೆ ಆಗಿರಲಿಲ್ಲ. ಇದೇ ಗ್ರಾಮದ 65 ವರ್ಷದ ಟಿಲ್ಕಾ ಬಾಯಿ ನೇತಮ್ ಕೂಡ ಮದುವೆ ಬಂಧನಕ್ಕೆ ಸಿಲುಕಿಕೊಂಡಿರಲಿಲ್ಲ. ಈ ಇಬ್ಬರೂ ಪರಸ್ಪರರು ಪ್ರೀತಿಸಿ ಮನೆಯ ಸದಸ್ಯರು ಹಾಗೂ ಗ್ರಾಮದ ಹಿರಿಯರನ್ನು ಒಪ್ಪಿಸು ಮದುವೆ ಆಗಿ, ಬಾಳ ಇಳಿಸಂಜೆಯಲ್ಲಿ ಜೀವನ ಸಂಗಾತಿ ಆಗಿದ್ದಾರೆ.
ಈ ಎರಡೂ ಹಿರಿಯ ಜೀವಿಗಳು ಒಬ್ಬರನೊಬ್ಬರು ಇಷ್ಟಪಟ್ಟಿದ್ದರು. ವೃದ್ಧಾಪ್ಯದಲ್ಲಿ ಮದುವೆ ವಿಚಾರ ಮಾತಾಡಿದರೆ ಆಡಿಕೊಳ್ಳುವವರ ಬಾಯಿಗೆ ಆಹಾರ ಆಗುತ್ತೇವೆ ಎಂಬುದನ್ನು ಲೆಕ್ಕಿಸಲಿಲ್ಲ. ಗ್ರಾಮದ ಸರ್ಪಂಚ್ ಆದ (ಮುಖಂಡ) ಹರ್ಚಂದ್ ಧ್ರುವ್, ಹಿರಾಲಾಲ್ ಧ್ರುವ್ ಮತ್ತು ಇತರ ಗ್ರಾಮಸ್ಥರ ಮುಂದೆ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ನಮ್ಮ ಮದುವೆ ಮಾಡಿಕೊಡಿ ಎಂದು ಪ್ರಸ್ತಾಪಿಸಿದ್ದಾರೆ. ವೃದ್ಧ ಜೀವಿಗಳ ಪ್ರೀತಿಗೆ ಊರಿನ ಎಲ್ಲರೂ ಸಹಮತ ವ್ಯಕ್ತಪಡಿಸಿ ಮದುವೆ ಮಾಡಿಸಿದ್ದಾರೆ.
ಅಕ್ಷಯ ತೃತೀಯ ದಿನದ ಭಾನುವಾರದಂದು ಇವರಿಬ್ಬರ ವಿವಾಹ ನೆರವೇರಿಸಲಾಗಿದೆ. ಕುಟುಂಬ ಸದಸ್ಯರು ಹಾಗೂ ಕೆಲವು ಗ್ರಾಮಸ್ಥರು ಭಾಗವಹಿಸಿದ್ದರು. ಲಾಕ್‌ಡೌನ್ ನಡುವೆಯೂ ಹಿರಿಯರಿಬ್ಬರೂ ಸಂಪ್ರದಾಯದೊಂದಿಗೆ ವಿವಾಹ ಆಗಿದ್ದಾರೆ. ಅಜ್ಜ - ಅಜ್ಜಿಯ ಮದುವೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚರ್ಚೆಯ ವಿಷಯವಾಗಿದೆ.