ಗುವಾಹಟಿ (ಅಸ್ಸೋಂ): ಅಸ್ಸೋಂನ ಕೊಕ್ರಜಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ -17ರಲ್ಲಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೊಗ್ರಿಬಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಚಟಗುರಿಯಲ್ಲಿ ಈ ಅಪಘಾತ ಸಂಭವಿಸಿದೆ. ಸಪತ್‌ಗ್ರಾಮ್‌ನಿಂದ ಧುಬ್ರಿಗೆ ಹೋಗುತ್ತಿದ್ದ ಪ್ರಯಾಣಿಕರಿರುವ ಬಸ್ ಮತ್ತು ಗುವಾಹಟಿ ಕಡೆ ತೆರಳುತ್ತಿದ್ದ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಓದಿ:ಭಾರತದಲ್ಲಿ ಮೊದಲ ಚಾಲಕರಹಿತ ಮೆಟ್ರೋ ರೈಲು ಸಂಚಾರ.. ಇದರ ವಿಶೇಷ ಇಷ್ಟಿವೆ..
ಮೃತ ಐವರು ವ್ಯಕ್ತಿಗಳನ್ನು ಸಂದೇಶ್ ಅಲಿ, ಸತ್ತಾರ್ ಅಲಿ, ರಫಿಕುಲ್ ಇಸ್ಲಾಂ, ಬಶೀದುಲ್ ಇಸ್ಲಾಂ ಮತ್ತು ಸದರ್ ಕಾಜಿ ಎಂದು ಗುರುತಿಸಲಾಗಿದೆ. ಮೃತರಲ್ಲಿ ಒಬ್ಬನ ಗುರುತು ಇನ್ನೂ ಪತ್ತೆಯಾಗಿಲ್ಲ.
ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮೃತರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಕೊಕ್ರಜಾರ್ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.