ನವದೆಹಲಿ: ದೇಶದಲ್ಲಿ ನಿನ್ನೆ ಒಂದೇ ದಿನ 513 ವಿಮಾನಗಳು ಹಾರಾಟ ನಡೆಸಿದ್ದು, 39,969 ಮಂದಿ ಪ್ರಯಾಣ ಮಾಡಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಕೊರೊನಾ ವೈರಸ್‌ನಿಂದಾಗಿ ಹೇರಲಾಗಿದ್ದ ಲಾಕ್‌ಡೌನ್ ಸಡಿಲಿಕೆ ಮಾಡಿದ 2 ತಿಂಗಳ ಬಳಿಕ ದೇಶಿ ವಿಮಾನ ಸೇವೆಗೆ ಅವಕಾಶ ನೀಡಲಾಗಿತ್ತು. ಕಳೆದ ಗುರುವಾರದ ವೇಳೆಗೆ ಒಟ್ಟು 1,827 ವಿಮಾನಗಳು ಹಾರಾಟ ನಡೆಸಿವೆ. ಸೋಮವಾರ 428, ಮಂಗಳವಾರ - 445, ಬುಧವಾರ 460 ಹಾಗೂ ಗುರುವಾರ 494 ವಿಮಾನಗಳು ಹಾರಾಟ ನಡೆಸಿವೆ ಎಂದು ಸಚಿವ ಪುರಿ ಟ್ಟಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನಿನ್ನೆ ತಡರಾತ್ರಿ ವರೆಗೆ 513 ವಿಮಾನಗಳು ಸೇವೆ ನೀಡಿದ್ದು, 39,969 ಮಂದಿ ಪ್ರಯಾಣಿಸಿದ್ದಾರೆ. ಲಾಕ್‌ಡೌನ್‌ಗೂ ಮುನ್ನ ನಿತ್ಯ 3 ಸಾವಿರ ದೇಶಿ ವಿಮಾನಗಳು ಹಾರಾಟ ನಡೆಸುತ್ತಿದ್ದವು ಎಂದು ವಿಮಾನಯಾನ ಸಂಸ್ಥೆಗಳು ತಿಳಿಸಿವೆ.
ಕಳೆದ ಫೆಬ್ರವರಿಯಲ್ಲಿ 4.12 ಲಕ್ಷ ಮಂದಿ ವಿಮಾನ ಸೇವೆ ಪಡೆದಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುವ ಭೀತಿಯಿಂದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳು ಕಡಿಮೆ ಸಂಖ್ಯೆಯಲ್ಲಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಿವೆ.
ಮೇ 25 ರಿಂದ ದೇಶಿ ನಾಗರಿಕ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಂಫಾನ ಚಂಡಮಾರುತದ ಹೊಡೆತದಿಂದ ಕೋಲ್ಕತ್ತಾ ವಿಮಾನ ನಿಲ್ದಾಣ ಹಾನಿಗೀಡಾಗಿತ್ತು. ಪರಿಣಾಮ ಇಲ್ಲಿ ವಿಮಾನ ಸೇವೆ ಆರಂಭಿಸಿರಲಿಲ್ಲ.