ಜೋಧಪುರ (ರಾಜಸ್ಥಾನ): ಹಕ್ಕಿಜ್ವರದ ಭೀತಿ ಹಿನ್ನೆಲೆಯಲ್ಲಿ, ರಾಜಸ್ಥಾನದ ಜೋಧಪುರ ಜಿಲ್ಲೆಯ ಸೆತ್ರಾವಾ ಮತ್ತು ಫಲೋಡಿ ಪ್ರದೇಶಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿವೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಸೆತ್ರಾವಾ ಬಳಿ ಸುಮಾರು 27ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದು, ಫಲೋಡಿ ಸರೋವರ ಪ್ರದೇಶದಲ್ಲೂ 20ಕ್ಕೂ ಹೆಚ್ಚು ಕಾಗೆಗಳು ಸಾವನ್ನಪ್ಪಿವೆ. ಇದನ್ನು ಕಂಡು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಕಾಗೆಗಳ ಕಳೇಬರಗಳ ಮಾದರಿಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದ್ದು, ಕಾಗೆಗಳು ಹಕ್ಕಿಜ್ವರದಿಂದ ಸತ್ತಿವೆಯೇ? ಅಥವಾ ಬೇರೆ ಯಾವುದಾದರೂ ಕಾರಣವೇ ಎಂಬುದನ್ನು ಪರಿಶೀಲಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭೂ ವಿವಾದ; ಕಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು!
ಬುಧವಾರವಷ್ಟೇ ಜೋಧಪುರ ಸಮೀಪದಲ್ಲಿರುವ ಕೆರು ಗ್ರಾಮದಲ್ಲಿ ಹಲವಾರು ಕಾಗೆಗಳು ಮೃತಪಟ್ಟಿದ್ದವು. ಇದಾದ ನಂತರ ಫಲೋಡಿ ಸರೋವರ ಪ್ರದೇಶದಲ್ಲಿ ಕಾಗೆಗಳು ಮೃತಪಟ್ಟಿವೆ.
ಇದಕ್ಕೂ ಮೊದಲು ತೆಗೆದುಕೊಂಡು ಹೋಗಿದ್ದ ಕಾಗೆಗಳ ಕಳೇಬರಗಳ ಸ್ಯಾಂಪಲ್ಗಳನ್ನು ಭೋಪಾಲ್ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ (ಎನ್ಐಹೆಚ್ಎಸ್ಎಡಿ)ಯಲ್ಲಿ ಪರೀಕ್ಷಿಸಿದಾಗ ಹಕ್ಕಿ ಜ್ವರ ಅಂಶಗಳು ಕಂಡು ಬಂದಿರಲಿಲ್ಲ.
ಫಲೋಡಿ ಸರೋವರದಲ್ಲಿ ವಿಶಿಷ್ಠ ಪ್ರಬೇಧದ ಸಾವಿರಾರು ಕೊಕ್ಕರೆಗಳಿದ್ದು, ಇತ್ತೀಚಿನ ದಿನಗಳಲ್ಲಿ ಯಾವುದೇ ಕೊಕ್ಕರೆ ಸಾವನ್ನಪ್ಪಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈಗ ಫಲೋಡಿ ಹಾಗೂ ಸೆತ್ರಾವಾ ಪ್ರದೇಶದಲ್ಲಿ ಸಾವನ್ನಪ್ಪಿರುವ ಕಾಗೆಗಳ ಪರೀಕ್ಷೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.
ಇದಕ್ಕೂ ಮೊದಲು ಹಕ್ಕಿ ಜ್ವರದ ಇನ್ನೊಂದು ರೂಪವಾದ ಹೆಚ್5ಎನ್8 ವೈರಸ್ ರಾಜಸ್ಥಾನದ ಝಾಲವಾರ್, ಕೋಟಾ, ಬರನ್, ಜೈಪುರದಲ್ಲಿ ಕಂಡುಬಂದಿತ್ತು.