ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 42 ಲಕ್ಷ ಗಡಿ ದಾಟಿದೆ. ಇದರಲ್ಲಿ ಕೇವಲ 5 ರಾಜ್ಯಗಳ ಪಾಲು ಶೇಕಡಾ 60 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. 62 ರಷ್ಟು ಆಕ್ಟೀವ್ ಪ್ರಕರಣಗಳು ಮತ್ತು 70 ರಷ್ಟು ಮೃತರ ಪ್ರಮಾಣ ದೇಶದಲ್ಲಿನ ಕೋವಿಡ್‌ನಿಂದ ಸಂಭವಿಸಿದೆ ಎಂದು ಹೇಳಿದೆ.
ಐದು ರಾಜ್ಯಗಳಲ್ಲಿ ಪ್ರಮುಖವಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಹಾಗೂ ಉತ್ತರಪ್ರದೇಶದ ಪಾಲು ಹೆಚ್ಚಿದೆ.
ಮಹಾರಾಷ್ಟ್ರ ಈ ಪ್ರಮಾಣದಲ್ಲಿ ಅಗ್ರಸ್ಥಾನದಲ್ಲಿದ್ದು, ಅಲ್ಲಿ ಶೇಕಡಾ 21.6 ರಷ್ಟು ಹಾಗೂ ನೆರೆಯ ಆಂಧ್ರಪ್ರದೇಶದಲ್ಲಿ ಶೇಕಡಾ 11.8, ತಮಿಳುನಾಡಿನಲ್ಲಿ 11, ಕರ್ನಾಟಕದ ಪಾಲು 9.5 ಹಾಗೂ ಉತ್ತರಪ್ರದೇಶ ಪಾಲು ಶೇಕಡಾ 6.3ರಷ್ಟಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಮಹಾರಾಷ್ಟ್ರದ ಪಾಲು ಶೇಕಡಾ 26.76 ರಷ್ಟಿದೆ. ಆಂಧ್ರ 11.30, ಕರ್ನಾಟಕ 11.25, ಉತ್ತರಪ್ರದೇಶ 6.98 ಹಾಗೂ ತಮಿಳುನಾಡಿನಲ್ಲಿ ಶೇಕಡಾ 5.83 ರಷ್ಟಿವೆ ಎಂದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 11,915 ಹೊಸ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 9,575 ಮತ್ತು 7,826 ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ 5,820, ಯುಪಿಯಲ್ಲಿ 4,779 ಕೋವಿಡ್ ಕೇಸ್‌ಗಳು ದಾಖಲಾಗಿವೆ ಎಂದು ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಐದು ರಾಜ್ಯಗಳಲ್ಲಿ ಗುಣಮುಖರಾದವರ ಸಂಖ್ಯೆ ಶೇಕಡಾ 57 ರಷ್ಟಿದೆ. ದೇಶದಲ್ಲಿ ಒಟ್ಟಾರೆಯಾಗಿ 32,50,429 ಮಂದಿ ಸೋಂಕಿತನಿಂದ ಚೇತರಿಸಿಕೊಂಡಿದ್ದಾರೆ.