ಹರ್ದೋಯಿ (ಉತ್ತರ ಪ್ರದೇಶ): ಕೊರೊನಾ ವಿರುದ್ಧದ ಹೋರಾಟದಲ್ಲಿ ಪೌರ ಕಾರ್ಮಿಕರು ರಜೆಯಿಲ್ಲದೆ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಸೋಂಕು ನಿವಾರಕ ರಾಸಾಯನಿಕ ಸಿಂಪಡಣೆ ವೇಳೆ 40 ವರ್ಷದ ಸಿಬ್ಬಂದಿ ಸಾವನ್ನಪ್ಪಿದ ದುರ್ಘಟನೆ ವರದಿಯಾಗಿದೆ.
ರಾಜೇಶ್ ಕುಮಾರ್ ಎಂಬವರು ಇಲ್ಲಿನ ಲಕ್ಷ್ಮೀ ಪೂರ್ವ ಪ್ರದೇಶದಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ನೊಂದ ಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದು ಪಾಲಿಕೆ ಮುಖಗವಸು ನೀಡದ ಕಾರಣ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪರಿಹಾರವಾಗಿ 50 ಲಕ್ಷ ರೂ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.