ಬೀಜಿಂಗ್ (ಚೀನಾ): ಇಲ್ಲಿನ ಪ್ರಾಥಮಿಕ ಶಾಲೆಯೊಂದರ ಸುಮಾರು 40 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ರಕ್ಷಣಾ ಸಿಬ್ಬಂದಿ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಇಲ್ಲಿನ ಗುವಾಂಕ್ಸಿ ನಗರದಲ್ಲಿರುವ ವಾಂಗ್ಫೂ ಸೆಂಟ್ರಲ್ ಪ್ರೈಮರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.
ಅಲ್ಲದೆ ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಇನ್ನೂ ಘಟನೆಗೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಂಗ್ಫೂ ನಗರದ ಅಧಿಕಾರಿಗಳು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ದಾಳಿ ಮಾಡಿರುವುದು ಶಾಲಾ ಭದ್ರತಾ ಸಿಬ್ಬಂದಿಯಾಗಿರುವ 50 ವರ್ಷದ ಲಿ ಕ್ಸಿಯಾಮಿನ್ ಎಂದು ಮಾಹಿತಿ ನೀಡಿದೆ.
ಘಟನೆಯಲ್ಲಿ 40 ಜನರು ಗಾಯಗೊಂಡಿದ್ದಾರೆ. ಅದರಲ್ಲಿ ಶಾಲೆಯ ಪ್ರಾಂಶುಪಾಲರು, ಓರ್ವ ಸೆಕ್ಯೂರಿಟಿ ಗಾರ್ಡ್ ಹಾಗೂ ಒಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳದಿಂದ 8 ಆಂಬ್ಯುಲೆನ್ಸ್ಗಳ ಮೂಲಕ ಗಾಯಾಳುಗಳನ್ನು ಇಲ್ಲಿನ ಹ್ಯೂಜ್ಯೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಹೆಚ್ಚಿನ ಮಕ್ಕಳು 6 ವರ್ಷದೊಳಗಿನವರು ಎಂಬುದು ತಿಳಿದುಬಂದಿದೆ. ಅಲ್ಲದೆ ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಮುಂಭಾಗ ಪೋಷಕರು ಸಾಲುಗಟ್ಟಿ ನಿಂತಿದ್ದು, ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.