ನವದೆಹಲಿ: ದೇಶದ 325 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್ ತಿಳಿಸಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಕೋವಿಡ್-19 ಹರಡುವಿಕೆಯನ್ನು ತಡೆಯಲು ಕೇಂದ್ರ ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲಾ ಮಟ್ಟದಲ್ಲಿ ಕ್ಲಸ್ಟರ್‌ಗಳಿಗೆ ಸಣ್ಣ ಯೋಜನೆಗಳನ್ನು ರೂಪಿಸಿ ತಳಮಟ್ಟದಿಂದಲೇ ಕ್ರಮ ಕೈಗೊಳ್ಳಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ರಾಷ್ಟ್ರೀಯ ಪೋಲಿಯೋ ಕಣ್ಗಾವಲು ತಂಡದ ಸೇವೆಯನ್ನು ಬಳಸಿಕೊಂಡು ಈಗಾಗಲೇ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ ಎಂದಿದ್ದಾರೆ.
ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಆರೋಗ್ಯ ಕ್ಷೇತ್ರವು ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂತಹ ಕೈಗಾರಿಕೆಗಳನ್ನು ಸಚಿವರು ಪ್ರೋತ್ಸಾಹಿಸಲಿದ್ದಾರೆ. ಇದು ಆರ್ಥಿಕವಾಗಿ ಕುಸಿದಿರುವ ಭಾರತಕ್ಕೆ ನೆರವಾಗಲಿದೆ. ಜೊತೆಗೆ ಆರೋಗ್ಯ ಸಂಬಂಧಿತ ಉಪಕರಣಗಳಲ್ಲಿ ಸ್ವಾವಲಂಬನೆಗೆ ಅನುಕೂಲವಾಗಲಿದೆ ಎಂದು ಅಗರ್‌ವಾಲ್ ಹೇಳಿದ್ದಾರೆ.
ಈವರೆಗೆ 2,90,401 ಜನರನ್ನು ಪರೀಕ್ಷೆಗೊಳಪಡಿಸಲಾಗಿದೆ. ನಿನ್ನೆ ಒಂದೇ ದಿನ 30,043 ಮಂದಿಯನ್ನು ಪರೀಕ್ಷಿಸಿದ್ದು, ಇದರಲ್ಲಿ 26,331 ಮಂದಿಯನ್ನು ಐಸಿಎಂಆರ್‌ನ ಲ್ಯಾಬ್ನಲ್ಲಿ ಮತ್ತು 3,712 ಪರೀಕ್ಷೆಗಳನ್ನು 78 ಖಾಸಗಿ ಲ್ಯಾಬ್‌ಗಳಲ್ಲಿ ನಡೆಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಡಾ. ರಮಣ್ ಆರ್. ಗಂಗಾಕೇಡ್ಕರ್ ಇದೇ ವೇಳೆ ವಿವರಿಸಿದರು.
ಇನ್ನು ಈ ಕೆಳಗಿನ 27 ಜಿಲ್ಲೆಗಳಲ್ಲಿ ಈ ಹಿಂದೆ ಕೊರೊನಾ ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಕಳೆದ 14 ದಿನಗಳಿಂದ ಯಾವುದೇ ಪ್ರಕರಣ ಕಂಡುಬಂದಿಲ್ಲ.