ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನರಮೇಧ ಮುಂದುವರೆದಿದ್ದು, ಇಂದು ಮೂವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಇದರಿಂದ ಲೋಕಸಭೆ ಚುನಾವಣೆ ನಂತರ ನಡೆದ ಹಿಂಸಾಚಾರದಲ್ಲಿ ಈವರೆಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕೋಲ್ಕತ್ತಾದ ಹಲ್ಶಾನಪರ ಗ್ರಾಮದ ಖೈರುದ್ದೀನ್ ಶೇಖ್ (40), ಸೊಹೆಲ್ ರನಾ (22) ಹಾಗೂ ರಹೀಲ್ ಶೇಖ್ (32) ಎಂಬುವರ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಶಬ್ಬೀರ್ ಶೇಖ್ (40) ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳು ಹಲವೆಡೆ ದಾಳಿ ಮಾಡಿ, ಕೆಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಲಾಲ್ಬಾಘ್-ಮುರ್ಷಿದಾಬಾದ್ನ ಹೆಚ್ಚುವರಿ ಎಸ್ಪಿ ಅಂಗ್ಶುಮನ್ ರಾಯ್ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದವರು, ಹತ್ಯೆಯಾದ ಮೂವರು ಮತ್ತು ಶಬ್ಬೀರ್ ನಮ್ಮ ಪಕ್ಷದ ಕಾರ್ಯಕರ್ತರು. ಬಿಜೆಪಿ ಬೆಂಬಲದಿಂದ ದುಷ್ಕರ್ಮಿಗಳು ಇವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ನಡೆದ ಹತ್ಯೆಯಿಂದಾಗಿ ಮಮತಾ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ನಿರಂತರವಾಗಿ ಹತ್ಯೆ ನಡೆಯುತ್ತಿರುವುದರಿಂದ ಇಂದು ಕೇಂದ್ರದ ಗೃಹ ಇಲಾಖೆ ಸಹ ರಾಜ್ಯ ಸರ್ಕಾರಕ್ಕೆ ಆರೋಪಿಗಳ ವಿರುದ್ಧ ಕ್ರಮ ಜರುಗಿಸುವಂತೆ ನಿರ್ದೇಶನ ನೀಡಿದೆ. ಈ ಬಗ್ಗೆ ವರದಿ ನೀಡುವಂತೆಯೂ ಸೂಚಿಸಿದೆ.
ಮಾರ್ಚ್ 18ರಂದು ನಡೆದ ಪಕ್ಷದ ಡೊಂಕಲ್ ಪಂಚಾಯತ್ ಸಮಿತಿಯ ಅಧಿಕಾರಿ ಅಲ್ತಬ್ ಶೇಖ್ ಕೊಲೆ ಆರೋಪಿಗಳು ಜಾಮೀನಿನ ಮೇಲೆ ಹೊರಬಂದಿದ್ದಾರೆ. ಹಾಗಾಗಿ ಇಂದಿನ ಘಟನೆಗೂ ಅವರಿಗೂ ಸಂಬಂಧವಿದೆ ಎಂದು ಡೊಕ್ಲಾಂ ಮುನ್ಸಿಪಾಲಿಟಿ ಮುಖ್ಯಸ್ಥ ಸೌಮಿಕ್ ಹೊಸ್ಸೈನ್ ಹೇಳಿದ್ದಾರೆ.