ಅಸ್ಸೋಂ/ಮೇಘಾಲಯ/ಅರುಣಾಚಲ ಪ್ರದೇಶ: ಕಳೆದ 24 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ತಂದಿಟ್ಟ ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಮೂವರು ಮೃತಪಟ್ಟಿದ್ದಾರೆ. 350 ಗ್ರಾಮಗಳ ಎರಡೂವರೆ ಲಕ್ಷ ಜನರ ಬದುಕು ತತ್ತರಿಸಿ ಹೋಗಿದೆ.
ಕಳೆದ ವಾರ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಅವಾಂತರ ಸೃಷ್ಟಿಸಿ ಹೋದ ಬಳಿಕ ಇದೀಗ ಅಸ್ಸೋಂ, ಮೇಘಾಲಯ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಮೂರು ರಾಜ್ಯಗಳಲ್ಲಿ ಮೇ 26ರಿಂದ 28ರವರೆಗೆ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಎಚ್ಚರಿಕೆ ನೀಡಿತ್ತು.
ಅರುಣಾಚಲ ಪ್ರದೇಶದ ದಿಬಾಂಗ್ ವ್ಯಾಲಿ ಜಿಲ್ಲೆಯ ಅರ್ಜೂ ಗ್ರಾಮದಲ್ಲಿ ಮನೆ ಕುಸಿದು ಬಿದ್ದು ತಾಯಿ ಹಾಗೂ ಆಕೆಯ ಇಬ್ಬರು ಮಕ್ಕಳು ಸಾವನ್ನಪ್ಪಿರುವುದಾಗಿ ಇಟಾನಗರ ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟುಂಬಕ್ಕೆ 4 ಲಕ್ಷ ರೂ. ತುರ್ತು ಪರಿಹಾರವನ್ನು ಮುಖ್ಯಮಂತ್ರಿ ಪೆಮಾ ಖಂಡು ಘೋಷಿಸಿದ್ದಾರೆ.
ಮೇಘಾಲಯದಲ್ಲಿ 21 ಜಿಲ್ಲೆಗಳ 21 ಗ್ರಾಮಗಳ 1400 ಜನರ ಜೀವನ ಅಸ್ತವ್ಯಸ್ತವಾಗಿದೆ. ಅಸ್ಸೋಂನ ಕಾಮ್ರೂಪ್ ಜಿಲ್ಲೆಯಂತೂ ಸಂಪೂರ್ಣ ನೀರುಪಾಲಾಗಿದ್ದು, ರಸ್ತೆಗಳು ಕುಸಿದು ಬಿದ್ದಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆ ಮುಂದುವರೆಸಿವೆ.