ಕನೌಜ್: ಉತ್ತರ ಪ್ರದೇಶದ ಕನೌಜ್‌ನ ಜಲಾಲ್‌ಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಕಾನ್ಪುರದ ಅಜಿತ್ ಕುಮಾರ್ (30), ಶಕುಂತಲಾ (35) ಮತ್ತು ಏಳು ವರ್ಷದ ಬಾಲಕ ಆಯುಷ್ ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಜಲಾಲ್‌ಪುರ ಗ್ರಾಮದ ಬಳಿಯ ಜಿಟಿ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಮುಂಬದಿಯಿಂದ ವೇಗವಾಗಿ ಬರುತ್ತಿದ್ದ ಬಸ್ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.
ವ್ಯಾನ್‌ಗೆ ಡಿಕ್ಕಿ ಹೊಡೆದ ನಂತರ ಬಸ್ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ. ಬಸ್‌ನಲ್ಲಿದ್ದ ಹದಿನೆಂಟು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವ್ಯಾನ್ನಲ್ಲಿದ್ದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕನೌಜ್ ಪೊಲೀಸರು ರಕ್ಷಣಾ ಕಾರ್ಯ ನಡೆಸಿ, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.