ಕಾನ್ಪುರ (ಉತ್ತರ ಪ್ರದೇಶ): ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಸೋದರಳಿಯ ನಾಪತ್ತೆಯಾದ ಹಿನ್ನೆಲೆ ಆಕೆಯ ಕುಟುಂಬ ಸದಸ್ಯರ ಭದ್ರತೆಗಾಗಿ ನಿಯೋಜಿಸಲಾಗಿದ್ದ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಶನಿವಾರ ತನಿಖೆ ನಡೆಸಲು ಹೋದ ಇನ್ಸ್‌ಪೆಕ್ಟರ್ ಜನರಲ್ (ಲಕ್ನೋ ಶ್ರೇಣಿ) ಲಕ್ಷ್ಮಿ ಸಿಂಗ್ ಅವರು ಗನ್ನರ್ ನರೇಂದ್ರ ಕುಮಾರ್ ಯಾದವ್, ಕಾನ್‌ಸ್ಟೆಬಲ್ ರಾಜೇಶ್ ಕುಮಾರ್ ಮತ್ತು ಲೇಡಿ ಕಾನಸ್ಟೇಬಲ್ ಅನುಜ್ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ.
ಘಟನೆಯ ಕುರಿತು ಕುಟುಂಬದವರ ದೂರಿನ ಆಧಾರದ ಮೇಲೆ ಪೊಲೀಸರು ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಾಲಕನನ್ನು ಪತ್ತೆ ಹಚ್ಚಲು ತನಿಖೆ ಮತ್ತು ಶೋಧ ಕಾರ್ಯ ನಡೆಯುತ್ತಿದೆ.
ದೂರಿನಲ್ಲಿ ಹೆಸರಿಸಲಾಗಿರುವ ಕ್ಯಾಪ್ಟನ್ ಬಾಜ್‌ಪೈ, ಸರೋಜ್ ತ್ರಿವೇದಿ, ಅನಿತಾ, ಸುಂದರ ಲೋಧ್ ಮತ್ತು ಹರ್ಷಿತ್ ಬಾಜ್‌ಪೈ ಎಲ್ಲರೂ ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಶುಭಮ್, ಶಿವಂ ತ್ರಿವೇದಿ, ಹರಿಶಂಕರ್, ಉಮೇಶ್ ಮತ್ತು ರಾಮ್ ಕಿಶೋರ್ನ ಸಂಬಂಧಿಕರಾಗಿದ್ದಾರೆ.
"ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಐಪಿಸಿ ಸೆಕ್ಷನ್ 364ರ ಅಡಿಯಲ್ಲಿ ಬಿಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಬಾಲಕನನ್ನು ಹುಡುಕಲು ಬಿಹಾರ, ಬಾರಸಾಗ್ವಾರ್, ಪುರ್ವಾ, ಮೌರಾವನ್ ಮತ್ತು ಬಿಘಾಪುರ ಸೇರಿದಂತೆ ಐದು ಪೊಲೀಸ್ ಠಾಣೆಗಳ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಬಾಲಕನ್ನು ಪತ್ತೆಹಚ್ಚಲಿದ್ದೇವೆ" ಎಂದು ಉನ್ನಾವೊ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಲಕರ್ಣಿ ಹೇಳಿದ್ದಾರೆ.