ಹೊಸದಿಲ್ಲಿ: ಇರಾನ್ನ ಕೋಮ್ನಲ್ಲಿ ಸಿಲುಕಿರುವ ಎಲ್ಲ 250 ಭಾರತೀಯ ಯಾತ್ರಿಕರಿಗೆ ಕೋವಿಡ್-19 ಸೋಂಕು ತಗುಲಿದೆ ಹಾಗೂ ಅವರನ್ನು ಮರಳಿ ಕರೆತರಲಾಗಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಬುಧವಾರ ತಿಳಿಸಿದೆ.
ಇರಾನ್ನಲ್ಲಿ ಸಿಲುಕಿರುವ ಭಾರತೀಯರ ಆರೋಗ್ಯದ ಬಗ್ಗೆ ನಿಗಾವಹಿಸಲು ಹಾಗೂ ಅವರೊಂದಿಗೆ ಸದಾ ಸಂಪರ್ಕದಲ್ಲಿರುವಂತೆ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ನಿರ್ದೇಶನ ನೀಡಲು ಚಿಂತಿಸುತ್ತಿರುವುದಾಗಿ ಸುಪ್ರೀಂಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದೆ.
ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಹಾ ಅವರ ಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಗಂಭಿರವಾಗಿ ವರ್ತಿಸುತ್ತಿದೆ ಎಂಬುದು ನಮಗೆ ಮನವರಿಕೆಯಾಗಿದೆ ಎಂದು ಹೇಳಿತು.
ಕೇಂದ್ರ ಸರಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ಈಗಾಗಲೇ ಇರಾನ್ನಲ್ಲಿ ಸಿಲುಕಿದ್ದ ಬಹುತೇಕ ಭಾರತೀಯರನ್ನು ಕರೆ ತರಲಾಗಿದೆ ಎಂದು ತಿಳಿಸಿದರು.
ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲ ಸಂಜಯ ಹೆಗ್ಡೆ, ಇರಾನ್ನಲ್ಲಿನ ಎಲ್ಲ ಭಾರತೀಯರನ್ನು ಕರೆತರಲಾಗಿಲ್ಲ. ಈಗಲೂ ಅಲ್ಲಿ ಸಿಲುಕಿರುವ, ಕೋವಿಡ್-19 ಪಾಸಿಟಿವ್ ಆಗಿರುವ 250 ಭಾರತೀಯರು ಇರಾನ್ ಅಧಿಕಾರಿಗಳ ಕರುಣೆಯಲ್ಲಿ ಬದುಕುವಂತಾಗಿದೆ ಎಂದರು.
ಇದಕ್ಕೆ ಉತ್ತರಿಸಿದ ತುಷಾರ ಮೆಹ್ತಾ, ಪ್ರಸ್ತುತ ಎಲ್ಲ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿದೆ. ನಮ್ಮ ರಾಯಭಾರ ಆ ಎಲ್ಲ 250 ಜನರ ಸಂಪರ್ಕದಲ್ಲಿದೆ. ಅನುಕೂಲಕರ ಸಂದರ್ಭ ಒದಗಿ ಬಂದಾಗ ಅವರನ್ನು ಮರಳಿ ಕರೆತರಲಾಗುವುದು ಎಂದರು.