ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಲ್ಲಿನ ಜಾದವ್‌ಪುರದಲ್ಲಿ 24 ವರ್ಷದ ಮಾಡೆಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ದಕ್ಷಿಣ 24 ಪರಗಣ ಜಿಲ್ಲೆಯ ಜಯನಗರ ಪ್ರದೇಶದ ಬಿತಿ ಮಂಡಲ್ ಎಂದು ಗುರುತಿಸಲಾಗಿದೆ. ಮನೆಯ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಬಿತಿ ಮಂಡಲ್ ಜಾದವ್‌ಪುರದಲ್ಲಿ ಫ್ಲ್ಯಾಟ್ ಬಾಡಿಗೆಗೆ ಪಡೆದು ಏಕಾಂಗಿಯಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
"ಬಿತಿ ಮಂಡಲ್ ವಿವಿಧ ಮಾಡೆಲಿಂಗ್ ಕಾರ್ಯಗಳನ್ನು ಮಾಡಿದ್ದಳು. ಕೊರೊನಾ ವೈರಸ್ ಹಿನ್ನೆಲೆ ಯಾವುದೇ ಕೆಲಸವಿಲ್ಲದ ಕಾರಣ ಆಕೆ ಗಗನಸಖಿಯಾಗಲು ಸಂಸ್ಥೆಯೊಂದಕ್ಕೆ ಸೇರಿದ್ದಳು. ಆದರೆ, ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಎಲ್ಲವೂ ಸ್ಥಗಿತಗೊಂಡ ಕಾರಣ ಖಿನ್ನತೆಗೊಳಗಾಗಿದ್ದಳು" ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳಿಂದ ಆಕೆ ಮನೆಯಿಂದ ಹೊರ ಬಾರದ ಕಾರಣ ಆಕೆಯ ಮನೆಯ ಮಾಲೀಕರು ಜಾದವ್‌ಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
"ಆಕೆಯ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ, ಶವಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.