ಕೊಯಮತ್ತೂರು(ತಮಿಳುನಾಡು): ಪ್ರೀತಿಯಿಂದ ಸಾಕಿದ್ದ ನಾಯಿ ಮನೆಯಿಂದ ಹೊರಹಾಕು.. ಎಂದು ಪೋಷಕರು ಹೇಳಿದ್ದಕ್ಕೆ ಮನನೊಂದ 23 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರುನಲ್ಲಿ ನಡೆದಿದೆ.
ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 23 ವರ್ಷದ ಕವಿತಾ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದಳು. ಆದರೆ ರಾತ್ರಿ ವೇಳೆ ಅದು ಬೊಗಳಲು ಶುರು ಮಾಡುತ್ತಿದ್ದ ಕಾರಣ ಪಕ್ಕದ ಮನೆಯವರಿಗೆ ಕಿರಿಕಿರಿಯಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಕ್ಕದ ಮನೆಯವರು ಅನೇಕ ಸಲ ಅಸಮಾಧಾನ ತೋರಿಸಿದ್ದಾರೆ. ಪರಸ್ಪರ ಗಲಾಟೆಯೂ ನಡೆದಿದೆ. ಹೀಗಾಗಿ ನಾಯಿಯನ್ನು ಬೇರೆಡೆ ಬಿಟ್ಟು ಬರುವಂತೆ ಪೋಷಕರು ಕವಿತಾಗೆ ಸ್ವಲ್ಪ ಗದರಿಸಿ ಹೇಳಿದ್ದರಂತೆ.
ಇದಕ್ಕೆ ಕವಿತಾ ನಿರಾಕರಿಸಿದಾಗ ಕುಟುಂಬಸ್ಥರೊಂದಿಗೆ ವಾಗ್ವಾದ ನಡೆದಿದೆ. ಅದೇ ವೇಳೆ ರೂಮ್ನೊಳಗೆ ಹೋಗಿ ಸೊಸೈಡ್ ನೋಟ್ ಬರೆದಿಟ್ಟು ಯುವತಿ ನೇಣಿಗೆ ಶರಣಾಗಿದ್ದಾಳೆ.
ಡೆತ್ ನೋಟ್‌ನಲ್ಲೇನಿತ್ತು?
ಮಮ್ಮಿ, ಡ್ಯಾಡಿ, ಬ್ರದರ್, ದಯವಿಟ್ಟು ನನ್ನ ಪ್ರೀತಿಯ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ತೆಗೆದುಕೊಂಡಿರುವ ನಿರ್ಧಾರಕ್ಕಾಗಿ ಕ್ಷಮಿಸಿ, ಎಲ್ಲರೂ ಸಂತೋಷದಿಂದ ಇರಲು ಸಾಧ್ಯವಿಲ್ಲ. ವಾರದಲ್ಲಿ ಒಂದು ಸಲ ದೇವಾಲಯಕ್ಕೆ ಹೋಗಿ ಬನ್ನಿ ಎಂದು ಬರೆದಿಟ್ಟಿದ್ದಾಳೆ.
ಇದೀಗ ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ಸರ್ಕಾರಿ ಮೆಡಿಕಲ್ ಕಾಲೇಜ್ಗೆ ಯುವತಿ ಮೃತದೇಹ ತೆಗೆದುಕೊಂಡು ಹೋಗಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.