ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ಪರೇಡ್ಗಾಗಿ 22 ಟ್ಯಾಬ್ಲೋಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 32 ಮತ್ತು ಕೇಂದ್ರ ಸಚಿವಾಲಯ ಮತ್ತು ವಿವಿಧ ಇಲಾಖೆಗಳಿಂದ 24 ಟ್ಯಾಬ್ಲೋ ಸೇರಿದಂತೆ ಒಟ್ಟು 56 ಟ್ಯಾಬ್ಲೋಗಳ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ತಜ್ಞರ ತಂಡ 5 ಬಾರಿ ಸಭೆ ಸೇರಿ ಚರ್ಚಿಸಿದ ನಂತರ 22 ಟ್ಯಾಬ್ಲೋಗಳನ್ನು ಅಂತಿಮಗೊಳಿಸಲಾಗಿದೆ. ಇವುಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 16 ಮತ್ತು ಕೇಂದ್ರ ಸಚಿವಾಲಯ ಮತ್ತು ವಿವಿಧ ಇಲಾಖೆಗಳ 6 ಸೇರಿ ಒಟ್ಟು 22 ಟ್ಯಾಬ್ಲೋಗಳನ್ನ ಫೈನಲ್ ಮಾಡಲಾಗಿದೆ ಎಂದು ತಿಳಿಸಿದೆ.
ಪಶ್ಚಿಮ ಬಂಗಾಳ ಟ್ಯಾಬ್ಲೋ ತಿರಸ್ಕಾರ:
ಗಣರಾಜ್ಯೋತ್ಸವ ಮೆರವಣಿಗೆಗಾಗಿ ಪಶ್ಚಿಮ ಬಂಗಾಳ ಪ್ರಸ್ತಾವನೆ ಸಲ್ಲಿಸಿದ್ದ ಟ್ಯಾಬ್ಲೋವನ್ನು ತಿರಸ್ಕರಿಸಲಾಗಿದೆ. 2019ರಲ್ಲಿ ಭಾಗವಹಿಸಿದ್ದ ಟ್ಯಾಬ್ಲೋ ರೀತಿಯಲ್ಲೇ ಈ ಬಾರಿಯ ಟ್ಯಾಬ್ಲೋ ಇರುವುದರಿಂದ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸಮಿತಿ ತಿಳಿಸಿದೆ.
ಸಮಿತಿಯು ಶಿಫಾರಸು ಮಾಡುವ ಮೊದಲು ಟ್ಯಾಬ್ಲೋ ಪರಿಕಲ್ಪನೆ, ವಿನ್ಯಾಸ ಮತ್ತು ಅದರ ದೃಷ್ಟಿಕೋನ, ಪ್ರಭಾವ ಸೇರಿ ಇತರೆ ಅಂಶಗಳ ಆಧಾರದ ಮೇಲೆ ಪ್ರಸ್ತಾಪಗಳನ್ನು ಪರಿಶೀಲಿಸುತ್ತದೆ. ಸಮಯದ ಅಭಾವದಿಂದಾಗಿ ಮೆರವಣಿಗೆಯಲ್ಲಿ ಭಾಗವಹಿಸಲು ಸೀಮಿತ ಸಂಖ್ಯೆಯ ಟ್ಯಾಬ್ಲೋಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದಿದೆ.