ನವದೆಹಲಿ: ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ ಈ ಬಾರಿ ವರುಣ ತನ್ನ ರೌದ್ರ ನರ್ತನ ತೋರಿದ್ದಾನೆ. ಒಟ್ಟಾರೆ ಇದುವರೆಗೂ 1685 ಸಾವು ಸಂಭವಿಸಿವೆ. ಈಗ ಬಿಹಾರದಲ್ಲಿ ಮಳೆರಾಯ ತನ್ನ ಅಟ್ಟಹಾಸ ಮೆರೆಯುತ್ತಿದ್ದಾನೆ. ಈ ರಾಜ್ಯಗಳಲ್ಲೇ 200ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
ಇದುವರೆಗೂ 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಜಾಗತಿಕ ಹವಾಮಾನ ಬದಲಾವಣೆಯಿಂದಾಗಿ 25 ವರ್ಷಗಳಲ್ಲೇ ಅತಿ ಹೆಚ್ಚಿನ ಮಳೆಯಾಗಿದೆ. ದೇಶದ ಸುಮಾರು 277 ಜಿಲ್ಲೆಗಳು ವರುಣನ ಪ್ರಕೋಪಕ್ಕೆ ನಲುಗಿ ಬೆಂಡಾಗಿವೆ.
ಕೇಂದ್ರ ಗೃಹ ಇಲಾಖೆ ನೀಡಿರುವ ಅಂಕಿ - ಅಂಶಗಳ ಪ್ರಕಾರ ಸುಮಾರು 22 ಲಕ್ಷ ಮಂದಿಯನ್ನ ರಕ್ಷಣೆ ಮಾಡಿದ್ದು, ಸುಮಾರು 8,700 ಗಂಜಿ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಇನ್ನು ವಿಶ್ವಸಂಸ್ಥೆ ಪ್ರಕೃತಿ ವಿಕೋಪಗಳ ಅಪಾಯ ನಿರ್ವಹಣೆ ಸಂಸ್ಥೆ (UNDRR) ನೀಡಿರುವ ವರದಿ ಪ್ರಕಾರ 26 ಮಿಲಿಯನ್ ಅಂದರೆ 2.6 ಕೋಟಿ ಜನ ಬಡತನಕ್ಕೆ ತಳ್ಳಲ್ಪಡುತ್ತಿದ್ದಾರೆ. ಕಾರಣ ಏನಂದರೆ ಅದು ಪ್ರಕೃತಿ ವಿಕೋಪ.
ಜಾಗತಿಕ ಹವಾಮಾನ ವೈಪರೀತ್ಯದಿಂದ 1998- 2017 ರವರೆಗೆ ಭಾರೀ ಪರಿಣಾಮವನ್ನುಂಟು ಮಾಡಿದೆ. ಶೇ 44 ರಷ್ಟು ಪ್ರವಾಹವನ್ನುಂಟು ಮಾಡಿದೆ. ಭೂಕಂಪ, ಪ್ರವಾಹ, ಚಂಡಮಾರುತ ಹೀಗೆ ನಾನಾ ಕಾರಣಗಳಿಂದ ಸುಮಾರು 72ರಷ್ಟು ಹಾನಿಯುಂಟಾಗಿದೆ ಎನ್ನುತ್ತಿವೆ ವರದಿಗಳು.