ಶಹಜಹಾನಪುರ: ಭೀಕರವಾಗಿ ಸಂಭವಿಸಿರುವ ಅಪಘಾತದಲ್ಲಿ ಸುಮಾರು 6-7 ಮಕ್ಕಳು ಸೇರಿದಂತೆ 16 ಜನ ಮೃತಪಟ್ಟಿರುವ ಘಟನೆ ಶಹಜಹಾನಪುರ ಜಿಲ್ಲೆಯಲ್ಲಿ ನಡೆದಿದೆ.
ನವದೆಹಲಿ - ಲಖನೌ ಹೈವೇಯಲ್ಲಿ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಎರಡು ಟೆಂಪೋಗಳಿಗೆ ಡಿಕ್ಕಿ ಹೊಡೆದು ಅದರ ಮೇಲೆ ಉರುಳಿ ಬಿದ್ದಿದೆ ಎನ್ನಲಾಗುತ್ತಿದೆ. ಪರಿಣಾಮ ಟ್ರಕ್ ಕೆಳಗೆ ಸಿಲುಕಿಕೊಂಡ 16ಕ್ಕೂ ಹೆಚ್ಚು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಘಟನಾಸ್ಥಳಕ್ಕೆ ಆಗಮಿಸಿದ್ದಾರೆ. ಸ್ಥಳೀಯರ ನೆರವಿನಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು, ಸುಮಾರು 16 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದ್ದು, ಇನ್ನಷ್ಟು ಜನ ಟ್ರಕ್ ಕೆಳಗೆ ಸಿಲುಕಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಅಪಘಾತದಲ್ಲಿ ಐವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ.