ಪುಣೆ (ಮಹಾರಾಷ್ಟ್ರ): ಪುಣೆಯ ಸಹಾಕರ್‌ನಗರ ಪ್ರದೇಶದಲ್ಲಿ ಗೋಡೆ ಕುಸಿದು ಒಂದು ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದರೆ, ಪ್ರವಾಹಕ್ಕೆ ಮತ್ತಿಬ್ಬರು ಬಲಿಯಾದ ಘಟನೆ ನಡೆದಿದೆ. ವರ್ಷಧಾರೆಯ ಅಬ್ಬರಕ್ಕೆ ಸಾವಿಗೀಡಾದವರ ಸಂಖ್ಯೆ 11ಕ್ಕೇರಿದೆ.
ನಗರದಲ್ಲಿ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಗೋಡೆ ಕುಸಿದ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅವಶೇಷಗಳಡಿ ಸಿಲುಕಿದ್ದ ಶವಗಳನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಹೊರತೆಗೆದಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾಸೂನ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬುಧವಾರದಂದು ಭಾರತ ಹವಾಮಾನ ಇಲಾಖೆ (ಐಎಂಡಿ), ಮುಂಬೈ ಮತ್ತು ಮಹಾರಾಷ್ಟ್ರದ ನೆರೆ ಪ್ರದೇಶಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿತ್ತು.
ಮಂಗಳವಾರ, ಮುಂಬೈನ ಖಾರ್ ಪ್ರದೇಶದಲ್ಲಿ ಭಾಗಶಃ ಕುಸಿದ ಕಟ್ಟಡದ ಅವಶೇಷಗಳಡಿ ಸಿಲುಕಿ 10 ವರ್ಷದ ಬಾಲಕಿ ಮೃತಪಟ್ಟಿದ್ದ ಘಟನೆ ಮರೆಯುವ ಮುನ್ನವೇ ಈ ಅವಘಡ ಸಂಭವಿಸಿದೆ.
ಈ ಭಾಗದಲ್ಲಿ ಮಳೆ ಸಂಬಂಧಿ ಅನಾಹುತದಿಂದ ಇದೀಗ ಬಂದಿರುವ ಮಾಹಿತಿ ಪ್ರಕಾರ ಒಟ್ಟು 11 ಮಂದಿ ಅಸುನೀಗಿದ್ದಾರೆ. ಇನ್ನು ತೀವ್ರ ಮಳೆಯ ಹಿನ್ನೆಲೆ ಪುಣೆ ಡಿಸಿ ನೇವಲ್ ಕಿಶೋರ್ ರಾಮ್, ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಿದ್ದಾರೆ.