ವಿಜಯವಾಡ (ಆಂಧ್ರಪ್ರದೇಶ): ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇದೀಗ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದ್ದಾರೆ. ಇವತ್ತು ಅವರು ಬರೋಬ್ಬರಿ 1,068 ಆ್ಯಂಬುಲೆನ್ಸ್ ವಾಹನಗಳನ್ನು ಸಾರ್ವಜನಿಕ ಸೇವೆಗೆ ಲೋಕಾರ್ಪಣೆಗೊಳಿಸಿದರು.
108 ಮತ್ತು 104 ದೂರವಾಣಿ ಸಂಖ್ಯೆ ಹೊಂದಿರುವ ಆ್ಯಂಬುಲೆನ್ಸ್ಗಳು ಇವಾಗಿದ್ದು, ಇದಕ್ಕಾಗಿ ಒಟ್ಟು 201 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅತ್ಯಾಧುನಿಕ ಉಪಕರಣ, ವೈದ್ಯಕೀಯ ಸೌಲಭ್ಯಗಳು ಈ ವಾಹನದೊಳಗಿವೆ. ವಿಜಯವಾಡದ ಬೇಂಜ್ ಸರ್ಕಲ್ನಲ್ಲಿ ಆ್ಯಂಬುಲೆನ್ಸ್ಗಳಿಗೆ ಚಾಲನೆ ನೀಡಿದ ಸಿಎಂ ಜಗನ್ ಮೋಹನ್ ರೆಡ್ಡಿ, ಇಂದಿನಿಂದಲೇ ರಾಜ್ಯದ ವಿವಿಧ ಭಾಗಗಳಲ್ಲಿ ಇವುಗಳ ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ.
ರೋಗಿಯ ಸಂಬಂಧಿಕರಿಂದ ಫೋನ್ ಕರೆ ಸ್ವೀಕರಿಸಿದ ಕೇವಲ 15 ನಿಮಿಷಗಳಲ್ಲಿ ನಗರ ಪ್ರದೇಶ, 20 ನಿಮಿಷದಲ್ಲಿ ಗ್ರಾಮೀಣ ಪ್ರದೇಶ ಹಾಗೂ ಇತರೆ ಪ್ರದೇಶಗಳಲ್ಲಿ 25 ನಿಮಿಷಗಳಲ್ಲಿ ಇದರ ಸೇವೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ಅಳ್ಲ ನಾನಿ ತಿಳಿಸಿದರು.
ಅತ್ಯಾಧುನಿಕವಾಗಿ ನಿರ್ಮಾಣಗೊಂಡಿರುವ ಆ್ಯಂಬುಲೆನ್ಸ್ಗಳಲ್ಲಿ ಆಕ್ಸಿಜನ್ ಸಿಲಿಂಡರ್, ಸಿಸಿಟಿವಿ, ವೆಂಟಿಲೇಟರ್ ಸೇರಿದಂತೆ ಅನೇಕ ಉಪಕರಣಗಳು ಆ್ಯಂಬುಲೆನ್ಸ್‌ನಲ್ಲಿವೆ.