ಲೆಸ್ಸೊನಾ (ಇಟಲಿ): ಕೊರೊನಾ ಸೋಂಕು ತಗುಲಿದ್ದ ಇಟಲಿಯ 103 ವರ್ಷದ ಮಹಿಳೆಯೊಬ್ಬಳು ಸಂಪೂರ್ಣ ಗುಣಮುಖಳಾಗಿದ್ದಾಳೆ. ಕೊರೊನಾ ಸೋಲಿಸಿದ ಈ ಶತಾಯುಷಿ ಅಜ್ಜಿ ಈಗ ಇಟಲಿಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಅದಾ ಝಾನುಸ್ಸಿ ಹೆಸರಿನ ವೃದ್ಧೆಗೆ ಮಾರ್ಚ್ನಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಸಣ್ಣ ಪ್ರಮಾಣದ ಜ್ವರದಿಂದ ಬಳಲುತ್ತಿದ್ದ ಅವರು ಹಾಸಿಗೆ ಹಿಡಿದು ಹೊರಜಗತ್ತಿಗೆ ಸ್ಪಂದಿಸುವುದನ್ನೇ ಬಿಟ್ಟಿದ್ದರು. ಆಹಾರ ಸೇವನೆ ನಿಲ್ಲಿಸಿದ್ದರಿಂದ ಅವರನ್ನ ಸಲೈನ್ ಮೇಲಿಡಲಾಗಿತ್ತು. ಏಳು ದಿನಗಳ ನಂತರ ಕಣ್ತೆರೆದ ಅಜ್ಜಿ ಎದ್ದು ಕುಳಿತಿರುವುದು ಪವಾಡ ಸದೃಶವಾಗಿದೆ.
ಬಟ್ಟೆ ಕಾರ್ಖಾನೆಯೊಂದರ ನಿವೃತ್ತ ನೌಕರಳಾದ ಝಾನುಸ್ಸಿಗೆ ನಾಲ್ಕು ಮಕ್ಕಳು ಹಾಗೂ ನಾಲ್ಕು ಮೊಮ್ಮಕ್ಕಳಿದ್ದಾರೆ. ಲೆಸ್ಸೊನಾದ ಮಾರಿಯಾ ಗ್ರೇಜಿಯಾ ರೆಸ್ಟ್ ಹೋಂನಲ್ಲಿ ಮಹಿಳೆ ವಾಸಿಸುತ್ತಿದ್ದಾರೆ. ಈ ಕಟ್ಟಡದಲ್ಲಿ ಹಲವರಿಗೆ ಸೋಂಕು ತಗುಲಿದ್ದರಿಂದ ಇಡೀ ಕಟ್ಟಡವನ್ನೇ ಕ್ವಾರಂಟೈನ್ ಮಾಡಲಾಗಿತ್ತು.