ನವದೆಹಲಿ: ಭಾರತದ ಸುಮಾರು ನೂರು ಕೋಟಿ ಜನರು ನೀರಿನ ಅಭಾವದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಅದರಲ್ಲಿ 60 ಕೋಟಿ ಜನರು ತೀವ್ರತರವಾದ ನೀರಿನ ಕೊರತೆ ಎದುರಿಸುತ್ತಿದ್ದಾರೆ ಎಂದು ಇತ್ತೀಚಿನ ವರದಿ ಬಹಿರಂಗಪಡಿಸಿದೆ.
ಮಾರ್ಚ್ 22ರ 'ವಿಶ್ವ ನೀರಿನ ದಿನದ' ಅಂಗವಾಗಿ 'ಬೇನೆಥ್ ದಿ ಸರ್ಫೆಸ್; ದಿ ಸ್ಟೇಟ್ ಆಫ್ ದಿ ವರ್ಲ್ಡ್ ವಾಟರ್- 2019' ವರದಿ ಬಿಡುಗಡೆ ಆಗಿದ್ದು, 2050ರ ವೇಳೆಗೆ ಈಗಿನ ಪ್ರಮಾಣ 5 ಶತಕೋಟಿ ದಾಟಲಿದೆ ಎಂದು ಗಂಭೀರವಾಗಿ ಎಚ್ಚರಿಸಿದೆ.
ನೀರಿನ ಕೊರತೆ ತೀರ ಕೆಟ್ಟದಾಗಿ ಕಂಡು ಬರುತ್ತಿದ್ದು, ವಾತಾವರಣದ ಬದಲಾವಣೆ ಹಾಗೂ ಜನಸಂಖ್ಯೆಯ ಉಲ್ಬಣದಿಂದ ಜಲಸಂಪನ್ಮೂಲದ ಮೇಲಿನ ಬೇಡಿಕೆಯ ಹೊರೆ ದಿನೆ- ದಿನೆ ದ್ವಿಗುಣವಾಗುತ್ತಿದೆ.
2040ರ ವೇಳೆಗೆ 33 ದೇಶಗಳು ತೀವ್ರತರವಾದ ನೀರಿನ ಬವಣೆ ಎದುರಿಸುತ್ತಿದ್ದು, ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಮಧ್ಯಪ್ರಾಚ್ಯದ 15 ರಾಷ್ಟ್ರಗಳು, ಉತ್ತರ ಆಫ್ರಿಕಾದ ರಾಷ್ಟ್ರಗಳು, ಪಾಕಿಸ್ತಾನ, ಟರ್ಕಿ, ಅಫ್ಘಾನಿಸ್ತಾನ, ಸ್ಪೇನ್ ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ರಾಷ್ಟ್ರಗಳು ನೀರಿನ ಅಭಾವಕ್ಕೆ ತತ್ತರಿಸಲಿವೆ ಎಂದು ವರದಿ ಎಚ್ಚರಿಸಿದೆ.
ಜಾಗತಿಕ ಅಂತರ್ಜಲ ಸವಕಳಿ ಪ್ರಮಾಣವು ಮಿತಿಮೀರಿದ್ದು, 2000 ಮತ್ತು 2010 ರ ನಡುವೆ ಶೇ 22ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಭಾರತದ ಅಂತರ್ಜಲ ಸವಕಳಿಯ ಪ್ರಮಾಣ ಶೇ 23ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ವಿಶ್ವದಲ್ಲೇ ಭಾರತ ಅತಿಹೆಚ್ಚಿನ ಪ್ರಮಾಣ ಅಂತರ್ಜಲ ಬಳಸುತ್ತಿದ್ದು, ಜಗತಿನ ಒಟ್ಟು ಬಳಕೆಯಲ್ಲಿ ಭಾರತದ ಶೇ 24ರಷ್ಟಿದೆ. ಶೇ 12ರಷ್ಟು ಅಂತರ್ಜಲವನ್ನು ರಫ್ತು ಮಾಡುತ್ತಿರುವ 3ನೇ ದೊಡ್ಡ ರಾಷ್ಟ್ರ ಸಹ ಭಾರತವಾಗಿದೆ.
ಶ್ರೀಮಂತ ಪಾಶ್ಚಾತ್ಯ ದೇಶಗಳಿಂದ ಆಮದು ಮಾಡಿಕೊಳ್ಳುವ ಆಹಾರ ಮತ್ತು ಬಟ್ಟೆಗಳನ್ನು ಬಡ ಮತ್ತು ಅಂಚಿನಲ್ಲಿರುವ ಸಮುದಾಯಗಳ ಜನರು ನಿತ್ಯದ ಶುದ್ಧೀಕರಣಕ್ಕೆ ಸಾಕಷ್ಟು ನೀರು ವ್ಯಯಿಸಬೇಕಿದೆ. ಅದಕ್ಕೆ ಅಗತ್ಯವಾದಷ್ಟು ನೀರು ಹೊಂದಿಸಲು ಹೆಣಗಾಡುತ್ತಿವೆ. ಶ್ರೀಮಂತ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಇನ್ನಷ್ಟು ಜಲ ವಿರಳ ರಾಷ್ಟ್ರಗಳನ್ನಾಗಿ ಮಾಡುತ್ತಿವೆ ಎಂದು ದಿ ವರ್ಲ್ಡ್ ವಾಟರ್ ಆಪಾದಿಸಿದೆ.