ಜೈಪುರ(ರಾಜಸ್ತಾನ): ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಜಗಳಕ್ಕೆ ಸಾಕ್ಷಿಯಾಗಿದ್ದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಇಂದು ಸಂಜೆ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನವನ್ನು ಪ್ರವೇಶಿಸಲಿದೆ.
ಯಾತ್ರೆಯು ಮಧ್ಯಪ್ರದೇಶದಿಂದ ರಾಜಸ್ಥಾನದ ಝಲಾವರ್‌ನತ್ತ ಪ್ರವೇಶಿಸಲಿದೆ. ರಾಹುಲ್ ಗಾಂಧಿ ಸೇರಿದಂತೆ ಇತರೆ ಯಾತ್ರಾರ್ಥಿಗಳಿಗೆ ಝಲಾವರ್ನಲ್ಲಿರುವ ಚಾವ್ಲಿ ಚೌರಾಹಾದಲ್ಲಿ ಅದ್ದೂರಿ ಸ್ವಾಗತಕ್ಕೆ ತಯಾರಿ ಮಾಡಲಾಗಿದೆ.
ಭಿನ್ನಾಭಿಪ್ರಾಯ ಹೊಂದಿದ್ದ ಮತ್ತು ಸಿಎಂ ಹುದ್ದೆಗಾಗಿ ಹಗ್ಗ ಜಗ್ಗಾಟ ನಡೆಸುತ್ತಿರುವ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಪೈಲಟ್ ಈ ವೇಳೆ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ರಾಜಸ್ಥಾನ ಯಾತ್ರೆಯ ಮೇಲೆ ಇವರಿಬ್ಬರ ಜಗಳ ಪರಿಣಾಮ ಬೀರಬಹುದೆಂಬ ಆತಂಕವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೇ ಸಚಿನ್ ಪೈಲೆಟ್ ಈ ಬಗ್ಗೆ ಸ್ಪಷ್ಟೀಕರಿಸಿದ್ದು, ನಮ್ಮ ರಾಜ್ಯವು ಸಂಪೂರ್ಣವಾಗಿ ಒಗ್ಗೂಡಿದೆ. ಅಲ್ಲದೇ ಯಾತ್ರೆಯು ಇತರೆ ರಾಜ್ಯಗಳಿಗಿಂತ ಹೆಚ್ಚು ಯಶಸ್ವಿಯಾಗಲಿದೆ ಎಂದಿದ್ದಾರೆ.
“ನಾವೆಲ್ಲರೂ ಇಂದು ಭಾರತ್ ಜೋಡೋ ಯಾತ್ರೆಯನ್ನು ಸ್ವಾಗತಿಸಲು ಸಿದ್ಧರಿದ್ದೇವೆ. ಜಲಾವರ್ನಲ್ಲಿ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯದಲ್ಲಿ ಇದೊಂದು ಐತಿಹಾಸಿಕ ಯಾತ್ರೆಯಾಗಲಿದೆ. ಈ ಯಾತ್ರೆಗೆ ಪಕ್ಷದ ಕಾರ್ಯಕರ್ತರಲ್ಲದೇ, ರಾಜ್ಯದ ಜನರಲ್ಲೂ ಹೆಚ್ಚಿನ ಉತ್ಸಾಹವಿದೆ" ಎಂದು ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಹೇಳಿದ್ದಾರೆ.
ರಾಹುಲ್ ಗಾಂಧಿ ಸೋಮವಾರ ಬೆಳಗ್ಗೆ 6 ಗಂಟೆಗೆ ಕಾಳಿ ತಲೈನಿಂದ ರಾಜಸ್ಥಾನದ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ. ಯಾತ್ರೆಯು 14 ಕಿ.ಮೀ ಕ್ರಮಿಸಿ ಬೆಳಗ್ಗೆ 10 ಗಂಟೆಗೆ ಬಾಲಿ ಬೋರ್ಡಾ ಚೌರಾ ತಲುಪಲಿದೆ. ಬಳಿಕ ನಹರ್ದಿಯಿಂದ ಮಧ್ಯಾಹ್ನ 3.30 ಕ್ಕೆ ಪುನರಾರಂಭಗೊಂಡು 6.30 ಕ್ಕೆ ಚಂದ್ರಭಾಗ ಚೌರಾಹಾ ತಲುಪಲಿದೆ. ಸಂಜೆ ಚಂದ್ರಭಾಗ ಚೌರಾದಲ್ಲಿ ಕಾಂಗ್ರೆಸ್ ಮುಖಂಡರ ಕಾರ್ನರ್ ಮೀಟಿಂಗ್ ನಡೆಯಲಿದೆ.
ಡಿಸೆಂಬರ್ 21 ರಂದು ಹರಿಯಾಣವನ್ನು ಪ್ರವೇಶಿಸುವ ಮೊದಲು ರಾಹುಲ್ ಗಾಂಧಿ, ಜಲಾವರ್, ಕೋಟಾ, ಬುಂಡಿ, ಸವಾಯಿ ಮಾಧೋಪುರ್, ದೌಸಾ ಮತ್ತು ಅಲ್ವಾರ್ ಜಿಲ್ಲೆಗಳ ಮೂಲಕ ರಾಜ್ಯದಲ್ಲಿ ಸುಮಾರು 500 ಕಿ.ಮೀ ಕ್ರಮಿಸಲಿದ್ದಾರೆ. ಅಲ್ಲದೇ ಡಿಸೆಂಬರ್ 15 ರಂದು ದೌಸಾದ ಲಾಲ್ಸೋಟ್‌ನಲ್ಲಿ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಡಿಸೆಂಬರ್ 19 ರಂದು ಅಲ್ವಾರ್‌ನ ಮಳಖೇಡದಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ಬೈಕ್ ಸವಾರಿ ಮಾಡಿದ ರಾಹುಲ್ ಗಾಂಧಿ