ಹೈದರಾಬಾದ್: ಭಾರತ್ ಬಯೋಟೆಕ್ ತನ್ನ ಕೋವಿಡ್ ಲಸಿಕೆಯಾದ 'ಕೋವಾಕ್ಸಿನ್' ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ್ದು, ಡೆಲ್ಟಾ ರೂಪಾಂತರದ ವಿರುದ್ಧ ಇದು ಶೇ. 65.2ರಷ್ಟು ಪರಿಣಾಮಕಾರಿಯಾಗಿ ಹೋರಾಡುತ್ತದೆ ಎಂದು ತಿಳಿಸಿದೆ.
ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯ ಸಂಶೋಧಕರು ಇದನ್ನು ಸಾಬೀತು ಮಾಡಿದ್ದು, ಈ ಅಧ್ಯಯನದ ವರದಿ 'ಲ್ಯಾನ್ಸೆಟ್ ಸಾಂಕ್ರಾಮಿಕ ರೋಗಗಳು' ಎಂಬ ಜರ್ನಲ್ನಲ್ಲಿ ನವೆಂಬರ್ 23ರಂದು ಪ್ರಕಟವಾಗಿದೆ. ಈ ವಿಚಾರ ಹಂಚಿಕೊಂಡಿದ್ದಕ್ಕಾಗಿ ಏಮ್ಸ್ ಸಂಶೋಧಕರನ್ನು ಭಾರತ್ ಬಯೋಟೆಕ್ ಶ್ಲಾಘಿಸಿದೆ.
ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ವೇಳೆ, ಅಂದರೆ ಡೆಲ್ಟಾ ರೂಪಾಂತರ ಉಲ್ಬಣಗೊಳ್ಳುವ ವೇಳೆ ಏಪ್ರಿಲ್ 15 ಮತ್ತು ಮೇ 15 ನಡುವೆ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಿರುವ ಆಸ್ಪತ್ರೆಯ 2,714 ಆರೋಗ್ಯ ಕಾರ್ಯಕರ್ತರ ಡೇಟಾವನ್ನು ಈ ಅಧ್ಯಯನ ಆಧರಿಸಿದೆ. ಕೋವಾಕ್ಸಿನ್ ಲಸಿಕೆಯ ಎರಡೂ ಡೋಸ್ ಪಡೆದವರಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಶೇ.65.2ರಷ್ಟು ಪರಿಣಾಮಕಾರಿ ಈ ಲಸಿಕೆ ಹೋರಾಡಿದೆ ಎಂಬುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: India Covid Report: ದೇಶದಲ್ಲಿ ನಿನ್ನೆ 396 ಮಂದಿ ಕೊರೊನಾಗೆ ಬಲಿ; ಮೃತರ ಸಂಖ್ಯೆ 4.66 ಲಕ್ಷಕ್ಕೆ ಏರಿಕೆ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧಿಕಾರಿ ಜಾಕೋಬ್ ಜಾನ್, ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಸಾರ್ವಜನಿಕರ ಮೇಲೆ ಮಾಡಲಾಯಿತು ಹಾಗೂ ಈ ಅಧ್ಯಯನವನ್ನು ಏಮ್ಸ್ನ ಆರೋಗ್ಯ ಕಾರ್ಯಕರ್ತರ ಮೇಲೆ ವಿಶೇಷವಾಗಿ ಎರಡನೇ ಅಲೆಯ ಸಂದರ್ಭ ಮಾಡಲಾಯಿತು.
ಕೋವಾಕ್ಸಿನ್ ಲಸಿಕೆಯು ಜನರನ್ನು ಕೋವಿಡ್ನಿಂದ ಗಂಭೀರವಾದ ಆರೋಗ್ಯ ಸಮಸ್ಯೆಗೆ ತುತ್ತಾಗುವ, ಐಸಿಯುಗೆ ದಾಖಲಾಗುವ ಮತ್ತು ಸಾವಿನ ಸಂಖ್ಯೆಯನ್ನು ಶೇ.100ರಷ್ಟು ತಡೆಯಿತು. ಒಂದು ಡೋಸ್ ಪಡೆದ ಮೇಲೆ ಸೋಂಕಿಗೆ ಒಳಗಾಗುವುದನ್ನು ಶೇ.50ರಷ್ಟು ತಪ್ಪಿಸಿದೆ ಹಾಗೂ ಎರಡೂ ಡೋಸ್ ಪಡೆದವರ ಮೇಲೆ ಶೇ.77.8 ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ತಿಳಿಸಿದರು.