ನವದೆಹಲಿ: ಭಾರತ್ ಬಯೋಟೆಕ್‌ನ ಮೂಗಿನ ಲಸಿಕೆಯನ್ನು ತುರ್ತು ಬಳಕೆಗಾಗಿ ಕಳೆದ ವರ್ಷ ಸೆಪ್ಟೆಂಬರ್ 6 ರಂದು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಆದರೆ ಇಲ್ಲಿಯವರೆಗೆ ಈ ಲಸಿಕೆಯನ್ನು ಬಳಸಲಾಗುತ್ತಿಲ್ಲ. iNCOVACC ರೋಲ್‌ಔಟ್ ನಂತರ ಈಗ ಮತ್ತೊಂದು ಲಸಿಕೆಯನ್ನು ಸೇರ್ಪಡೆ ಮಾಡಲಾಗಿದೆ. ಇದನ್ನು ಕೋವಿನ್ ಪೋರ್ಟಲ್‌ನಲ್ಲೂ ಸೇರಿಸಲಾಗಿದೆ. ಇದರ ನಂತರ ಭಾರತ್ ಬಯೋಟೆಕ್‌ನ ಕೋವಾಕ್ಸಿನ್, ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಕೋವಾವಾಕ್ಸ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಬಯೋಲಾಜಿಕಲ್ ಇ ಲಿಮಿಟೆಡ್‌ನ ಕಾರ್ಬೆವಾಕ್ಸ್, iNCOVACC ಸಹ ಕೋವಿನ್ ಪೋರ್ಟಲ್‌ನಲ್ಲಿ ಲಭ್ಯವಿದೆ.
ಲಸಿಕೆಯ ವಿಶೇಷತೆ: ಇದು ವಿಶ್ವದ ಮೊದಲ ಮೂಗಿನ ಲಸಿಕೆ. ಈ ಲಸಿಕೆಯನ್ನು ಭಾರತ್ ಬಯೋಟೆಕ್ ಮತ್ತು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯ ಜಂಟಿಯಾಗಿ ತಯಾರಿಸಿದೆ. ಇದನ್ನು ಮೊದಲು BBV154 ಎಂದು ಕರೆಯಲಾಗಿತ್ತು. ಈಗ iNCOVACC ಎಂದು ಹೆಸರಿಸಲಾಗಿದ್ದು, ಲಸಿಕೆಯನ್ನು ಮೂಗಿನ ಮೂಲಕ ನೀಡಲಾಗುತ್ತದೆ.
ಲಸಿಕೆ ಹೇಗೆ ಕೆಲಸ ಮಾಡುತ್ತದೆ?: ಕೊರೊನಾ ಸೇರಿದಂತೆ ಹೆಚ್ಚಿನ ವೈರಸ್‌ಗಳು ಲೋಳೆಪೊರೆಯ ಮೂಲಕ ದೇಹ ಪ್ರವೇಶಿಸುತ್ತವೆ. ಲೋಳೆಪೊರೆಯು ಮೂಗು, ಶ್ವಾಸಕೋಶಗಳು, ಜೀರ್ಣಾಂಗ ವ್ಯವಸ್ಥೆಯಲ್ಲಿ ಕಂಡುಬರುವ ಜಿಗುಟಾದ ವಸ್ತು. ಮೂಗಿನ ಲಸಿಕೆಯು ಲೋಳೆಪೊರೆಯಲ್ಲಿ ನೇರವಾಗಿ ಪ್ರತಿರಕ್ಷಣಾ ಪ್ರತಿಕ್ರಿಯೆ ಉಂಟುಮಾಡುತ್ತದೆ. ಆದರೆ ಸ್ನಾಯುವಿನ ಲಸಿಕೆಯಿಂದ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ.
ವೈದ್ಯರ ಪ್ರಕಾರ, ಮೂಗಿನ ಲಸಿಕೆ ಉತ್ತಮವಾಗಿದೆ. ಏಕೆಂದರೆ ಅದನ್ನು ಅನ್ವಯಿಸಲು ಸುಲಭ. ಇದು ಲೋಳೆಪೊರೆಯಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸುತ್ತದೆ. ಇದರಿಂದಾಗಿ ಆರಂಭದಲ್ಲಿ ಸೋಂಕು ತಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಉಳಿದ ಲಸಿಕೆಗಿಂತ ಇದು ಎಷ್ಟು ಭಿನ್ನ?: ಭಾರತದಲ್ಲಿ ಇಲ್ಲಿಯವರೆಗೆ ನೀಡಲಾಗುತ್ತಿರುವ ಎಲ್ಲಾ ಲಸಿಕೆಗಳು ಇಂಟ್ರಾಮಸ್ಕುಲರ್ ಲಸಿಕೆಗಳಾಗಿವೆ. ಇವುಗಳನ್ನು ಕೈಗೆ ಇಂಜೆಕ್ಷನ್ ನೀಡುವ ಮೂಲಕ ನಿರ್ವಹಿಸಲಾಗುತ್ತದೆ. ಭಾರತ್ ಬಯೋಟೆಕ್ ಪರಿಚಯಿಸುವ ಮೂಗಿನ ಲಸಿಕೆ ವಿಭಿನ್ನವಾಗಿದೆ. ಈ ಲಸಿಕೆಯನ್ನು ಮೂಗಿನ ಮೂಲಕ ನೀಡಲಾಗುತ್ತದೆ. ಇದರರ್ಥ ಮೂಗಿನಲ್ಲಿ ಚುಚ್ಚುಮದ್ದು ನೀಡಲಾಗುತ್ತದೆ ಎಂದಲ್ಲ. ಬದಲಿಗೆ ಹನಿಯಂತೆ ಮೂಗಿಗೆ ಹಾಕಿಕೊಳ್ಳಬೇಕಿದೆ.
ಸ್ನಾಯುವಿನ ಲಸಿಕೆಗಿಂತ ಮೂಗಿನ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣ ಲಸಿಕೆಯನ್ನು ತೋಳಿನೊಳಗೆ ಚುಚ್ಚಿದಾಗ ಅದು ಶ್ವಾಸಕೋಶವನ್ನು ಸೋಂಕಿನಿಂದ ರಕ್ಷಿಸುತ್ತದೆ. ಆದರೆ ಮೂಗಿನ ಮೂಲಕ ನೀಡುವ ಲಸಿಕೆ ವೈರಸ್ ವಿರುದ್ಧ ಪ್ರತಿರಕ್ಷೆಯನ್ನು ಸೃಷ್ಟಿಸುತ್ತದೆ. ಇದರಿಂದ ವೈರಸ್ ದೇಹವನ್ನು ಪ್ರವೇಶಿಸುವುದಿಲ್ಲ. ಮೊದಲನೇ ಡೋಸ್ನಲ್ಲಿ ನಾಲ್ಕು ಹನಿಗಳ ಲಸಿಕೆ ಇರುತ್ತದೆ. ನಾಲ್ಕು ವಾರಗಳ ನಂತರ ಎರಡನೇ ಡೋಸ್ ತೆಗೆದುಕೊಳ್ಳಬೇಕಾಗುತ್ತದೆ.
iNCOVACC ಮೂರು ಹಂತದ ಪ್ರಯೋಗಗಳಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದ್ರೆ ಮೂರನೇ ಹಂತದ ಪ್ರಯೋಗವನ್ನು ಎರಡು ರೀತಿಯಲ್ಲಿ ಮಾಡಲಾಯಿತು. ಮೊದಲ ಪ್ರಯೋಗವನ್ನು 3,100 ಜನರ ಮೇಲೆ ನಡೆಸಲಾಗಿದೆ. ಅವರಿಗೆ ಎರಡು ಡೋಸ್ ಲಸಿಕೆ ನೀಡಲಾಯಿತು. ಎರಡನೇ ಪ್ರಯೋಗವನ್ನು 875 ಜನರ ಮೇಲೆ ಮಾಡಲಾಗಿದ್ದು, ಅವರಿಗೆ ಈ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ನೀಡಲಾಗಿದೆ. ಪ್ರಯೋಗದಲ್ಲಿ ಈ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಲಸಿಕೆಯನ್ನು ಯಾರು ಪಡೆಯಬಹುದು?: ಈ ಲಸಿಕೆಯನ್ನು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾತ್ರ ನೀಡಲಾಗುತ್ತದೆ. ಎರಡು ಡೋಸ್ ತೆಗೆದುಕೊಂಡವರು ಮಾತ್ರ ಲಸಿಕೆ ತೆಗೆದುಕೊಳ್ಳಬಹುದಾಗಿದೆ. ಇದು ಪ್ರಾಥಮಿಕ ಲಸಿಕೆಯ ಅನುಮೋದನೆಯನ್ನು ಸಹ ಪಡೆದುಕೊಂಡಿದೆ. ಅಂದರೆ, ನೀವು ಯಾವುದೇ ಲಸಿಕೆ ತೆಗೆದುಕೊಳ್ಳದಿದ್ದರೂ ಸಹ ಇದನ್ನು ಪಡೆಯಬಹುದಾಗಿದೆ.
ಕೋವಿಶೀಲ್ಡ್ ಹಾಕಿಸಿಕೊಂಡವರು ಪಡೆಯಬಹುದೇ?: ಭಾರತ್ ಬಯೋಟೆಕ್‌ನ iNCOVACC ಲಸಿಕೆಯನ್ನು ಹೆಟೆರೊಲಾಜಸ್ ಬೂಸ್ಟರ್ ಆಗಿ ಬಳಸಲಾಗುತ್ತದೆ. ಅಂದರೆ, ನೀವು ಬೇರೆ ಕೆಲವು ಲಸಿಕೆಗಳನ್ನು ತೆಗೆದುಕೊಂಡಿದ್ದರೂ ಕೂಡಾ ಇದನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದಾಗಿದೆ.
ಲಸಿಕೆಯನ್ನು ಹೇಗೆ ಪಡೆಯಲು ಸಾಧ್ಯ?: ನೀವು ಇಲ್ಲಿಯವರೆಗೆ ಬೂಸ್ಟರ್ ಡೋಸ್ ತೆಗೆದುಕೊಳ್ಳದಿದ್ದರೆ ಈ ಲಸಿಕೆಯನ್ನು ಪಡೆಯಬಹುದಾಗಿದೆ. ಬೂಸ್ಟರ್ ಡೋಸ್‌ಗಾಗಿ CoWin ಪೋರ್ಟಲ್‌ನಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಲಸಿಕೆಯನ್ನು ಎಲ್ಲಿಂದ ಪಡೆಯಬೇಕು?: ಸದ್ಯಕ್ಕೆ ಈ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ಸರ್ಕಾರಿ ಆಸ್ಪತ್ರೆ ಅಥವಾ ಸರ್ಕಾರಿ ಕೇಂದ್ರಗಳಲ್ಲಿ ಇದು ಲಭ್ಯವಿಲ್ಲ.
ಇದರ ಬೆಲೆ?: ದೇಶದಲ್ಲಿ 18 ರಿಂದ 59 ವರ್ಷ ವಯಸ್ಸಿನ ಜನರು ಬೂಸ್ಟರ್ ಡೋಸ್‌ಗೆ ಮಾತ್ರ ಹಣ ಪಾವತಿಸಬೇಕಾಗುತ್ತದೆ. ಭಾರತ್ ಬಯೋಟೆಕ್ ಈ ಲಸಿಕೆಯ ಬೆಲೆಯನ್ನು ನಿಗದಿಪಡಿಸಿದೆ. ಕಂಪನಿಯ ಪ್ರಕಾರ, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಈ ಲಸಿಕೆಯನ್ನು 325 ರೂಪಾಯಿ ನೀಡಿ ಪಡೆಯುತ್ತವೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯ ಬೆಲೆ 800 ರೂಪಾಯಿ ಆಗಿದೆ.
ಲಸಿಕೆ ವಿತರಣೆ ಯಾವಾಗ ಪ್ರಾರಂಭ?: iNCOVACC ಲಸಿಕೆ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ಹೇಳಿದೆ. ಪ್ರಸ್ತುತ, ಈ ಲಸಿಕೆಯನ್ನು ಕೋವಿನ್ ಪೋರ್ಟಲ್ ಮೂಲಕ ಮಾತ್ರ ಪಡೆಯಬಹುದಾಗಿದೆ.
ಇದನ್ನೂ ಓದಿ: ಕೊರೊನಾ ನಂತರ ಕರ್ನಾಟಕದಲ್ಲಿ ಶಾಲಾ ಮಕ್ಕಳ ಕಲಿಕಾ ಮಟ್ಟ ಕುಸಿತ: ಎಎಸ್ಇಆರ್ ವರದಿ