ಹೈದರಾಬಾದ್: ರಾಜ್ಯದ ಎಲ್ಲಾ ಜನರಿಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡುವ ನಿರ್ಧಾರಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ಸರ್ಕಾರವು ಕೋವಿಡ್ ಲಸಿಕೆ ತಯಾರಿಸುವ ಫಾರ್ಮಾ ಕಂಪನಿಯಾದ ಭಾರತ್ ಬಯೋಟೆಕ್ ಜೊತೆ ಸಭೆ ನಡೆಸಿದೆ.
ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ನಿರ್ದೇಶನದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರು ಭಾರತ್ ಬಯೋಟೆಕ್ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲ್ಲ ಅವರನ್ನು ಬಿಆರ್ಕೆಆರ್ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ಈ ವೇಳೆ ಹೆಚ್ಚಿನ ಲಸಿಕೆ ಉತ್ಪಾದನೆ ಮಾಡಬೇಕು ಮತ್ತು ವ್ಯಾಕ್ಸಿನೇಷನ್ ಸಂದರ್ಭದಲ್ಲಿ ತೆಲಂಗಾಣಕ್ಕೆ ಮೊದಲ ಆದ್ಯತೆ ನೀಡಬೇಕೆಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಕಂಪನಿಗೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಸೆಮಿ ಲಾಕ್ಡೌನ್ ಮಧ್ಯೆ ಸಾಲು - ಸಾಲು ರಜೆ! ಬ್ಯಾಂಕ್ ವ್ಯವಹಾರಕ್ಕೆ ಈಗಲೇ ಪ್ಲಾನ್ ಮಾಡಿಕೊಳ್ಳಿ!
ತೆಲಂಗಾಣ ಸರ್ಕಾರದ ಮನವಿಗೆ ಭಾರತ್ ಬಯೋಟೆಕ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯಕ್ಕೆ ಗರಿಷ್ಠ ಪ್ರಮಾಣದ ಲಸಿಕೆ ನೀಡುವುದಾಗಿ ಭರವಸೆ ನೀಡಿರುವುದಾಗಿ ತಿಳಿದುಬಂದಿದೆ. ಈ ಸಭೆಯ ನಂತರ ತೆಲಂಗಾಣ ರಾಜ್ಯ ಕೈಗಾರಿಕಾ ವಿಭಾಗದ ಕಾರ್ಯದರ್ಶಿ ಜಯೇಶ್ ರಂಜನ್ ಮತ್ತು ಭಾರತ್ ಬಯೋಟೆಕ್ನ ನಿರ್ದೇಶಕ ಡಾ.ಸಾಯಿ ಪ್ರಸಾದ್ ಕೂಡಾ ಚರ್ಚಿಸಿದ್ದಾರೆ.