ಹೈದರಾಬಾದ್ (ತೆಲಂಗಾಣ): ತೆಲಂಗಾಣ ವಿಧಾನಸಭಾ ಚುನಾವಣೆ ಅಂತ್ಯವಾಗಿದೆ. ರಾಜ್ಯಾದ್ಯಂತ 119 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.64ರಷ್ಟು ಮತದಾನವಾಗಿದೆ. ಇದರ ನಡುವೆ ಚುನಾವಣಾ ಫಲಿತಾಂಶದ ಬಗ್ಗೆ ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ನಡೆಯುತ್ತಿದೆ. ಜೊತೆಗೆ ಚುನಾವಣಾ ಕದನದಲ್ಲಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಮೇಲೂ ಬೆಟ್ಟಿಂಗ್ ಮುಂದುವರಿದಿದೆ.
ತೆಲಂಗಾಣದಲ್ಲಿ ಸದ್ಯ ಬಿಆರ್ಎಸ್ ಕಳೆದ ಎರಡು ಅವಧಿಗಳಿಂದ ಸತತವಾಗಿ ಅಧಿಕಾರದಲ್ಲಿದೆ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?, ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಯಾರು?, ಪ್ರಮುಖ ಪಕ್ಷಗಳ ರಾಜ್ಯ ಮಟ್ಟದ ನಾಯಕರು ಭವಿಷ್ಯವೇನು?, ಜಿಲ್ಲೆ ಮತ್ತು ಕ್ಷೇತ್ರವಾರು ಪಕ್ಷಗಳಲ್ಲಿ ಎಷ್ಟು ಗೆಲುವು ಮತ್ತು ಪ್ರಮುಖ ನಾಯಕರ ಜಯ ಹೇಗೆ?... ಹೀಗೆ ಹಲವು ವಿಷಯಗಳ ಮೇಲೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂರಲ್ಲಿ ಬೆಟ್ಟಿಂಗ್ ನಡೆಸಲಾಗುತ್ತಿದೆ. ಸರಿಸುಮಾರು 500 ಕೋಟಿ ಬೆಟ್ಟಿಂಗ್ ನಡೆಯುತ್ತಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ.
ತೆಲಂಗಾಣ ಜೊತೆಗೆ ರಾಜಸ್ಥಾನ, ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ಮಿಜೋರಾಂ ರಾಜ್ಯಗಳಲ್ಲೂ ಚುನಾವಣೆ ನಡೆದಿದೆ. ಈ ಐದು ರಾಜ್ಯಗಳ ಚುನಾವಣೆಯ ಬೆಟ್ಟಿಂಗ್ ಮೌಲ್ಯ 1,000 ಕೋಟಿ ಮೀರಲಿದೆ ಎಂದು ವರದಿಯಾಗಿದೆ. ಬೇರೆ, ಬೇರೆ ದಿನಾಂಕಗಳಲ್ಲಿ ಆಯಾ ರಾಜ್ಯಗಳಲ್ಲಿ ಮತದಾನ ನಡೆದರೂ ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಡಿಸೆಂಬರ್ 3ರಂದು ಪ್ರಕಟವಾಗಲಿದೆ. ಇದರಿಂದ ಬೆಟ್ಟಿಂಗ್ ಮೌಲ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಒಂದು ಲಕ್ಷ ಬಾಜಿ ಕಟ್ಟಿದರೆ; 2 ಲಕ್ಷ ಬಹುಮಾನ: ಈ ಬಾರಿ ರಾಜ್ಯ ಮಟ್ಟದಲ್ಲಿ ಗೆಲ್ಲುವ ನಾಯಕರ ಜೊತೆಗೆ ಪ್ರಮುಖ ಪಕ್ಷಗಳ ಪ್ರಮುಖ ನಾಯಕರ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆಯುತ್ತಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ, ಸಚಿವರಾದ ಕೆಟಿಆರ್, ಹರೀಶ್ ರಾವ್, ಬಿಜೆಪಿ ಮುಖಂಡ ಈಟಾಳ ರಾಜೇಂದರ್ ಮುಂತಾದ ಪ್ರಮುಖ ನಾಯಕರ ಗೆಲುವು ಮತ್ತು ಬಹುಮತದ ಬಗ್ಗೆ ಪಂಟರ್‌ಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎನ್ನಲಾಗಿದೆ.
ಪ್ರಸ್ತುತ, ಆನ್‌ಲೈನ್‌ನಲ್ಲಿ ಕೆಲವು ಬೆಟ್ಟಿಂಗ್ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ 1 ಲಕ್ಷ ರೂ. ದರದಲ್ಲಿ ಬೆಟ್‌ಗಳು ನಡೆಯುತ್ತಿವೆ. ಕೆಲವು ಬುಕ್ಕಿಗಳು 1:10ರ ಬಗ್ಗೆ ಪ್ರಚಾರ ಮಾಡುತ್ತಿದ್ಧಾರೆ. ತೆಲಂಗಾಣ ಚುನಾವಣೆಯಲ್ಲಿ ಮುಂಬೈ, ದೆಹಲಿ ಸೇರಿದಂತೆ ಕೆಲ ರಾಜ್ಯಗಳ ಗ್ಯಾಂಗ್ಗಳು ಸಹ ಫೀಲ್ಡಿಗಿಳಿದು ಬೆಟ್ಟಿಂಗ್ ನಡೆಸುತ್ತಿವೆ.