ಕೋಲ್ಕತಾ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಕಾವು ದಿನೇದಿನೆ ಹೆಚ್ಚಾಗುತ್ತಿದೆ. ಈ ನಡುವೆ 5ನೇ ಹಂತದ ಚುನಾವಣೆಗೆ ಪ್ರಚಾರ ಕಾರ್ಯ ಅಂತಿಮಗೊಂಡಿದೆ. 5ನೇ ಹಂತದ ಚುನಾವಣೆಗೆ ನಡೆದ ಪ್ರಚಾರ ಕಾರ್ಯದಲ್ಲಿ ಉಂಟಾದ ಹಿಂಸಾಚಾರದಲ್ಲಿ ನಾಲ್ವರು ಮೃತಪಟ್ಟಿದ್ದ ಘಟನೆ ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.
ಅಲ್ಲದೆ 5ನೇ ಹಂತದ ಚುನಾವಣೆ ವೇಳೆ ಪ್ರಚಾರದಿಂದ ಸಿಎಂ ಮಮತಾ ಬ್ಯಾನರ್ಜಿಯನ್ನು ನಿಷೇಧಿಸಲಾಗಿತ್ತು. ಪ್ರಚೋದನಕಾರಿ ಭಾಷಣ ಮಾಡಿದ್ದ ಆರೋಪದಡಿ 24 ಗಂಟೆಗಳ ನಿಷೇಧ ಹೇರಲಾಗಿತ್ತು. ಇದನ್ನು ಸಮಾಜವಾದಿ ಪಕ್ಷದ (ಎಸ್‌ಪಿ) ಅಖಿಲೇಶ್ ಯಾದವ್ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನವಾಬ್ ಮಲಿಕ್ ಸೇರಿ ಹಲವು ನಾಯಕರು ಖಂಡಿಸಿದ್ದರು.
ಅಲ್ಲದೆ ಬಿಜೆಪಿ ನಾಯಕರಾದ ಜಿ ಕಿಶನ್ ರೆಡ್ಡಿ ಮತ್ತು ಜಾಫರ್ ಇಸ್ಲಾಂ ಅವರು ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಮತ್ತು ಈ ಘಟನೆಗೆ ಅವರೇ ಜವಾಬ್ದಾರರಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಬ್ಯಾನರ್ಜಿ ಮಾತ್ರವಲ್ಲದೆ ಸಿಟಾಲ್ಕುಚಿ ಹಿಂಸಾಚಾರದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ಅಭ್ಯರ್ಥಿ ರಾಹುಲ್ ಸಿನ್ಹಾ ಅವರನ್ನು ಮಂಗಳವಾರ 48 ಗಂಟೆಗಳ ಕಾಲ ಇಸಿ ನಿಷೇಧಿಸಿತ್ತು. ಘಟನೆ ಸಂಬಂಧ ದಿಲೀಪ್ ಘೋಷ್ ಮತ್ತು ಸುವೇಂದು ಅಧಿಕಾರಿಗೆ ನೋಟಿಸ್ ನೀಡಿತ್ತು.
ಇಸಿ ವಿರುದ್ಧ ಧರಣಿ ಕುಳಿತ್ತಿದ್ದ ದೀದಿ : ಇಸಿ ಹೇರಿದ್ದ ನಿಷೇಧಕ್ಕೆ ಪ್ರತಿಯಾಗಿ ಖಂಡನೆ ವ್ಯಕ್ತಪಡಿಸಿದ್ದ ಬ್ಯಾನರ್ಜಿ ಧರಣಿ ಕುಳಿತ್ತಿದ್ದರು. ಕೋಲ್ಕತ್ತಾದ ಗಾಂಧಿ ಮೂರ್ತಿ ಬಳಿ ಧರಣಿ ಕುಳಿತು ಚುನಾವಣಾ ಆಯೋಗದ ನೀತಿ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ನನ್ನನ್ನು ತಡೆಯಲು ಬಿಜೆಪಿ ಕೇಂದ್ರ ಸಂಸ್ಥೆಗಳನ್ನ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ರಾಹುಲ್ ಕಿಡಿ : ಇದರ ನಡುವೆ ಪ್ರಚಾರಕ್ಕಿಳಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಹೋದ ಕಡೆಗಳಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು.
ಅಸ್ಸೋಂನ ಜನ ತಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಹೇಳುತ್ತಾರೆ. ತಮಿಳುನಾಡು ಮತ್ತು ಬಂಗಾಳ ರಾಜ್ಯಗಳು ಇದೇ ವಿಷಯವನ್ನು ಎದುರಿಸುತ್ತಿವೆ. ಬಿಜೆಪಿ, ಆರ್‌ಎಸ್‌ಎಸ್ ಎಲ್ಲಿಗೆ ಹೋದರೂ ಅಲ್ಲಿ ದ್ವೇಷ ತೀವ್ರಗೊಳ್ಳಲು ಪ್ರಾರಂಭಿಸುತ್ತದೆ ಎಂದು ರಾಹುಲ್ ಗಾಂಧಿ ಡಾರ್ಜಿಲಿಂಗ್‌ನಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು.