ಜಾರ್‌ಗ್ರಾಮ್ (ಪಶ್ಚಿಮ ಬಂಗಾಳ): ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಒತ್ತಾಯಿಸಿ ಕುರ್ಮಿ ಸಮುದಾಯದ 'ರೈಲು ತಡೆ' ಪ್ರತಿಭಟನೆ ಭಾನುವಾರ 6ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾಕಾರರು ಪಶ್ಚಿಮ ಬಂಗಾಳದ ಕೆಲವು ಭಾಗಗಳಲ್ಲಿ ರೈಲ್ವೆ ಹಳಿಗಳು ಮತ್ತು ರಸ್ತೆಗಳನ್ನು ನಿರ್ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುರ್ಮಿಗಳ ಹಲವಾರು ಸಂಘಟನೆಗಳು ಪಶ್ಚಿಮ ಮೇದಿನಿಪುರ್ ಜಿಲ್ಲೆಯ ಖೇಮಸುಲಿ ಮತ್ತು ಪುರುಲಿಯಾ ಜಿಲ್ಲೆಯ ಕಸ್ತೌರ್ ನಿಲ್ದಾಣದಲ್ಲಿ ಕೋಲ್ಕತ್ತಾದಿಂದ ಮುಂಬೈಗೆ ಸಂಪರ್ಕಿಸುವ ರೈಲ್ವೆ ಹಳಿಗಳು ಮತ್ತು ಪಕ್ಕದ ಎನ್ಹೆಚ್-6 ಅನ್ನು ನಿರ್ಬಂಧಿಸಿವೆ. ರಸ್ತೆ ತಡೆ ಪರಿಣಾಮವಾಗಿ ಗುರುವಾರ(ಏ.6) 74 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ನೂರಾರು ವಾಹನಗಳು ಸಿಲುಕಿಕೊಂಡವು. ಏ.5 ರಿಂದ ಒಟ್ಟು 496 ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಆಗ್ನೇಯ ರೈಲ್ವೆ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಶೆಡ್ಯೂಲ್ 9ಕ್ಕೆ ಸೇರಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ
ಶನಿವಾರ ರದ್ದುಗೊಂಡ ರೈಲುಗಳಲ್ಲಿ ಹೌರಾ-ಚಕ್ರಧರಪುರ ಎಕ್ಸ್‌ಪ್ರೆಸ್, ಹೌರಾ-ಬೊಕಾರೊ ಸ್ಟೀಲ್ ಸಿಟಿ ಎಕ್ಸ್‌ಪ್ರೆಸ್, ರಾಂಚಿ-ಬೊಕಾರೊ ಸ್ಟೀಲ್ ಸಿಟಿ ಪ್ಯಾಸೆಂಜರ್ ವಿಶೇಷ, ಹೌರಾ-ಬಾರ್ಬಿಲ್ ಜನ ಶತಾಬ್ದಿ ಎಕ್ಸ್‌ಪ್ರೆಸ್, ಪುರುಲಿಯಾ-ಹೌರಾ ಎಕ್ಸ್‌ಪ್ರೆಸ್, ಎಲ್‌ಟಿಟಿ-ಶಾಲಿಮಾರ್ ಎಕ್ಸ್‌ಪ್ರೆಸ್, ಹೌರಾ-ಪುಣೆ ಡುರೊಂಟೊ ಎಕ್ಸ್‌ಪ್ರೆಸ್ ರೈಲುಗಳು ಸೇರಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪುರಿ-ನವದೆಹಲಿ ಎಕ್ಸ್‌ಪ್ರೆಸ್, ಹೌರಾ- ಮುಂಬೈ ಸಿಎಸ್‌ಎಂಟಿ ಗೀತಾಂಜಲಿ ಎಕ್ಸ್‌ಪ್ರೆಸ್, ಹೌರಾ-ತಿತಾಲಗಢ ಎಕ್ಸ್‌ಪ್ರೆಸ್ ಮತ್ತು ಸಂತ್ರಗಚಿ-ಪುರುಲಿಯಾ ಎಕ್ಸ್‌ಪ್ರೆಸ್ ಅನ್ನು ಸಹ ರದ್ದುಗೊಳಿಸಲಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: 'ರೈಲ್ ರೋಖೋ ಯಶಸ್ವಿ, ಸರ್ಕಾರ ಕೃಷಿ ಕಾನೂನುಗಳನ್ನು ರದ್ದುಗೊಳಿಸಲೇಬೇಕು'
ಪ್ರತಿಭಟನೆ ಮುಂದುವರೆಯಲಿದೆ.. ದಿಗ್ಬಂಧನದಿಂದಾಗಿ ಶುಕ್ರವಾರ ಕನಿಷ್ಠ 64 ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ರದ್ದುಗೊಳಿಸಲಾಗಿದೆ. ಎನ್ಹೆಚ್-6ರಲ್ಲಿ ನೂರಾರು ವಾಹನಗಳು ಸಿಲುಕಿಕೊಂಡಿದ್ದವು. ಪಶ್ಚಿಮ ಮೇದಿನಿಪುರ್ ಮತ್ತು ಜಾರ್‌ಗ್ರಾಮ್ ಜಿಲ್ಲೆಗಳ ಪಕ್ಕದ ರಸ್ತೆಗಳಲ್ಲಿಯೂ ಸಹ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪಶ್ಚಿಮ ಮೇದಿನಿಪುರ ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ ಧರಣಿ ನಿರತ ಸಂಘಟನೆಗಳೊಂದಿಗೆ ಸಭೆ ನಡೆಸಿದರು. ಆದರೆ ಇತ್ಯರ್ಥಕ್ಕೆ ಬರಲು ವಿಫಲವಾಗಿದೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಪಶ್ಚಿಮ ಬಂಗಾಳದ ಕುರ್ಮಿ ಸಮಾಜ ಸಮಿತಿ ಸದಸ್ಯ ಸುಶೀಲ್ ಕುಮಾರ್ ಮಹಾತಾ ಎಚ್ಚರಿಕೆ ನೀಡಿದ್ದಾರೆ.
ಬೇಡಿಕೆ ಏನು.. ಜಂಗಲ್ ಮಹಲ್ ಪ್ರದೇಶದ ಐದು ವಿಭಿನ್ನ ಸಂಘಟನೆಗಳ ಸಹಯೋಗದ ಪ್ರಯತ್ನದಡಿಯಲ್ಲಿ, ಕುರ್ಮಾಲಿ ಭಾಷೆಯನ್ನು ಭಾರತದ ಸಂವಿಧಾನದ 8ನೇ ಅನುಸೂಚಿಗೆ ಸೇರಿಸಲು ಮತ್ತು ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಮಂಗಳವಾರ ಆರಂಭವಾದ ಪ್ರತಿಭಟನೆಯಿಂದಾಗಿ ಜಾರ್ಖಂಡ್, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಸೇರಿದಂತೆ ಹಲವಾರು ಭಾಗಗಳಲ್ಲಿ ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಏಕೆಂದರೆ ಸಾವಿರಾರು ಜನರು ಆಗ್ನೇಯ ರೈಲ್ವೆಯನ್ನು ಅವಲಂಬಿಸಿದ್ದಾರೆ.
ಇದನ್ನೂ ಓದಿ: ಅಮೃತಸರದಲ್ಲಿ ಆರನೇ ದಿನಕ್ಕೆ ಕಾಲಿಟ್ಟ 'ರೈಲ್ ರೋಕೋ' ಆಂದೋಲನ!