ನವದೆಹಲಿ: ನೂತನ ಉಪರಾಷ್ಟ್ರಪತಿ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಮುಹೂರ್ತ ನಿಗದಿ ಮಾಡಿದ್ದು, ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಎನ್ಡಿಎ ಕೂಟದ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳ ರಾಜ್ಯಪಾಲರಾದ ಜಗದೀಪ್ ಧನ್ಕರ್ ಕಣಕ್ಕಿಳಿಯಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅಧಿಕೃತ ಘೋಷಣೆ ಹೊರಹಾಕಿದ್ದಾರೆ.
-
Attending the press conference at BJP HQ. https://t.co/NeTblHSlVF
— Jagat Prakash Nadda (@JPNadda) July 16, 2022 " class="align-text-top noRightClick twitterSection" data="
">Attending the press conference at BJP HQ. https://t.co/NeTblHSlVF
— Jagat Prakash Nadda (@JPNadda) July 16, 2022Attending the press conference at BJP HQ. https://t.co/NeTblHSlVF
— Jagat Prakash Nadda (@JPNadda) July 16, 2022
ದೆಹಲಿ ಪ್ರಧಾನಿ ಕಚೇರಿಯಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
ಪ್ರಧಾನಿ ಭೇಟಿಯಾಗಿದ್ದ ಧನ್ಕರ್: ಎನ್ಡಿಎ ಅಭ್ಯರ್ಥಿಯಾಗಿ ಹೆಸರು ಘೋಷಣೆಯಾಗುವುದಕ್ಕೂ ಕೆಲ ಗಂಟೆಗಳ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರನ್ನ ರಾಜ್ಯಪಾಲ ಧನ್ಕರ್ ಭೇಟಿ ಮಾಡಿದ್ದರು.
ಎಲ್ಲ ಪರಿಗಣನೆಗಳು ಮತ್ತು ಸಮಾಲೋಚನೆ ನಂತರ ಕಿಸಾನ್ ಪುತ್ರ(ರೈತರ ಮಗ) ಜಗದೀಪ್ ಧನ್ಕರ್ ಅವರನ್ನ ಬಿಜೆಪಿ ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯಾಗಿ ಘೋಷಿಸಿದ್ದೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು. 2019ರ ಜುಲೈ ತಿಂಗಳಲ್ಲಿ ಪಶ್ಚಿಮ ಬಂಗಾಳ ರಾಜ್ಯಪಾಲರಾಗಿ ಜಗದೀಪ್ ಧನ್ಕರ್ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡಾಗಿನಿಂದಲೂ ಬಂಗಾಳ ಮುಖ್ಯಮಂತ್ರಿ ಜೊತೆ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಅನೇಕ ಸಲ ಸುದ್ದಿಯಾಗಿದ್ದಾರೆ.
ಜಗದೀಪ್ ಧನ್ಕರ್ ಅವರ ರಾಜಕೀಯ ಜೀವನ: ಮೂರು ದಶಕಗಳಿಗೂ ಹೆಚ್ಚು ಸಾರ್ವಜನಿಕ ಸೇವೆಯಲ್ಲಿರುವ ಧನ್ಕರ್ 1989ರ ಲೋಕಸಭೆ ಚುನಾವಣೆಯಲ್ಲಿ ಜುಂಜುನು ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾರೆ. ಇದಾದ ಬಳಿಕ 1990ರಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದು,1993ರಲ್ಲಿ ಕಿಶನ್ಗಢ ಕ್ಷೇತ್ರದಿಂದ ರಾಜಸ್ಥಾನ ವಿಧಾನಸಭೆಗೆ ಆಯ್ಕೆಯಾದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 2019ರಲ್ಲಿ ಪಶ್ಚಿಮ ಬಂಗಾಳ ಗವರ್ನರ್ ಆಗಿ ನೇಮಕ ಮಾಡಿದ್ದಾರೆ. ಸದಾ ಒಂದಿಲ್ಲೊಂದು ವಿಭಿನ್ನ ಕೆಲಸಗಳ ಮೂಲಕ ಜನತೆಯ ಮನಗೆದ್ದಿರುವ ಇವರು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಅನೇಕ ವಿಚಾರಗಳಲ್ಲಿ ವಾಕ್ಸಮರ ನಡೆಸಿದ್ದಾರೆ. ಇದೀಗ ಎನ್ಡಿಎ ಅಭ್ಯರ್ಥಿಯಾಗಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಆಗಸ್ಟ್ 10ರಂದು ಅಂತ್ಯಗೊಳ್ಳಲಿದೆ. ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ. ರಾಷ್ಟ್ರಪತಿ ಚುನಾವಣೆಗೆ ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಫಲಿತಾಂಶ ಹೊರಬರಲಿದೆ. ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅವರು ಸ್ಪರ್ಧಿಸಿದ್ದರೆ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿದಿದ್ದಾರೆ.