ಬಿರ್ಭೂಮ್(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ನ ಎರಡು ಬಣಗಳ ನಡುವೆ ಘರ್ಷಣೆ ನಡೆದಿದ್ದು, ಸುಮಾರು 6 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದ ಈ ಘರ್ಷಣೆ ವೇಳೆ ಕಚ್ಚಾ ಬಾಂಬ್ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದುಬ್ರಾಜ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಗರ-ಪದುಮ ಗ್ರಾಮದಲ್ಲಿ ಅಭಿವೃದ್ಧಿ ಅಧಿಕಾರಿಯೊಬ್ಬರು ಸರ್ಕಾರದ ವಸತಿ ಯೋಜನೆಯೊಂದರ ಸಮೀಕ್ಷೆ ಸಂಬಂಧ ಆಗಮಿಸಿದ್ದ ವೇಳೆ ಘರ್ಷಣೆ ನಡೆದಿದ್ದು, ಟಿಎಂಸಿಯ ಎರಡು ಬಣಗಳ ನಡುವೆ ಘರ್ಷಣೆ ಸಂಭವಿಸಿದೆ.
ಕಚ್ಚಾ ಬಾಂಬ್ಗಳನ್ನು ಎಸೆಯುವುದು ಮಾತ್ರವಲ್ಲದೇ ಹಲವು ಶಸ್ತ್ರಗಳನ್ನೂ ಘರ್ಷಣೆ ವೇಳೆ ಬಳಸಲಾಗಿದೆ. ಗಾಯಾಳುಗಳನ್ನು ಸುರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸದ್ಯಕ್ಕೆ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದ್ದು, ಏಳು ಮಂದಿಯನ್ನು ಈ ಸಂಬಂಧ ಬಂಧಿಸಲಾಗಿದೆ. ಎರಡು ಶಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರನಾಥ್ ತ್ರಿಪಾಠಿ ಮಾಹಿತಿ ನೀಡಿದ್ದಾರೆ.
ಇದು ರಾಜಕೀಯ ಘರ್ಷಣೆ ಅಲ್ಲ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತ ಮಂಡಲ್ ಸ್ಪಷ್ಟನೆ ನೀಡಿದ್ದು, ಘರ್ಷಣೆ ನಡೆಸಿದ ಟಿಎಂಸಿಯ ಎರಡೂ ಬಣಗಳು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿವೆ ಎಂದು ದುಬ್ರಾಜ್ಪುರ ಬಿಜೆಪಿ ಶಾಸಕ ಅನೂಪ್ ಸಹಾ ತಿಳಿಸಿದ್ದಾರೆ.
ಇದನ್ನೂ ಓದಿ: ನವೆಂಬರ್ 29ರಂದು ಪಾರ್ಲಿಮೆಂಟ್ನತ್ತ ಟ್ರ್ಯಾಕ್ಟರ್ಗಳ ಮೆರವಣಿಗೆ: ರಾಕೇಶ್ ಟಿಕಾಯತ್