ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ 26 ವರ್ಷಗಳ ಸುದೀರ್ಘ ಸೆರೆವಾಸ ಅನುಭವಿಸಿದ ಹಿನ್ನೆಲೆಯಲ್ಲಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕು ಎಂಬ ಬಲ್ವಂತ್ ಸಿಂಗ್ ರಾಜೋನಾ ಮನವಿಯನ್ನು 2 ತಿಂಗಳೊಳಗೆ ತೀರ್ಮಾನಿಸುವಂತೆ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ಈ ಪ್ರಕರಣವನ್ನು ಕೇಂದ್ರ ಸರ್ಕಾರವೇ ನಿರ್ಧರಿಸಬೇಕಾಗಿದೆ. ಸುಪ್ರೀಂಕೋರ್ಟ್ನಲ್ಲಿ ಬಾಕಿ ಉಳಿದ ಮೇಲ್ಮನವಿ ಅರ್ಜಿಗಳಂತೆ ಇದೂ ಕೂಡ ಒಂದಾಗಿದೆ. ಹೀಗಾಗಿ ಈ ಪ್ರಕರಣದ ಅರ್ಜಿಯನ್ನು ಶೀಘ್ರವೇ ಇತ್ಯರ್ಥಪಡಿಸುವ ಸಲುವಾಗಿ ಕೋರ್ಟ್ ಕೇಂದ್ರ ಸರ್ಕಾರದ ಅಭಿಪ್ರಾಯ ಕೋರಿದೆ.
ಪಂಜಾಬ್‌ನ ಮಾಜಿ ಪೊಲೀಸ್ ಪೇದೆಯಾಗಿದ್ದ ರಾಜೋನಾ ಅವರು ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್‌ನ ಹೊರಗೆ ನಡೆದ ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ ಶಿಕ್ಷೆಗೊಳಗಾಗಿದ್ದಾನೆ. 1995 ರಲ್ಲಿ ನಡೆದ ಘಟನೆಯಲ್ಲಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಸೇರಿದಂತೆ 16 ಜನರು ಹತರಾಗಿದ್ದರು. ಈ ಘಟನೆಯ ಬಳಿಕ ನಡೆದ ವಿಚಾರಣೆಯಲ್ಲಿ ರಾಜೋನಾ ತಪ್ಪಿತಸ್ಥ ಎಂದು ರುಜುವಾತಾದ ಕಾರಣ ಆತನಿಗೆ 2007ರಲ್ಲಿ ಮರಣದಂಡನೆ ವಿಧಿಸಲಾಗಿದೆ.
ಓದಿ: ರಾಜ್ ಠಾಕ್ರೆ ಪ್ರಚೋದನಾತ್ಮಕ ಭಾಷಣ ಆರೋಪ: ಕ್ರಮದ ಸುಳಿವು ನೀಡಿದ ಮಹಾರಾಷ್ಟ್ರ ಗೃಹ ಸಚಿವ