ನವದೆಹಲಿ: ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ಸಾಲ ಪಡೆದು ಭಾರತದಿಂದ ಪರಾರಿಯಾಗಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿಯಂತಹ ಉದ್ಯಮಿಗಳ ಆಸ್ತಿ ಮಾರಾಟದಿಂದ ಈವರೆಗೆ 13,109.17 ಕೋಟಿ ರೂ.ಗಳನ್ನು ಬ್ಯಾಂಕ್‌ಗಳು ವಶಪಡಿಸಿಕೊಂಡಿರುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳಿಂದ ಪ್ರತಿಭಟನೆ ನಡುವೆಯೂ ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ಪೂರಕ ಅನುದಾನ ಬೇಡಿಕೆ (ಎರಡನೇ ಬ್ಯಾಚ್ ) ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಚಿವರು, ಜಾರಿ ನಿರ್ದೇಶನಾಲಯ ನೀಡಿರುವ ಮಾಹಿತಿಯಂತೆ, ಜುಲೈ 2021ರಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಆಸ್ತಿ ಮಾರಾಟದಿಂದ ಒಟ್ಟು 13,109,17 ಕೋಟಿ ಹಣವನ್ನು ಬ್ಯಾಂಕ್ ಗಳು ವಶಕ್ಕೆ ಪಡೆದಿವೆ ಎಂದು ಹೇಳಿದರು.
2021ರ ಜುಲೈ 16ರಂದು ಮದ್ಯದ ದೊರೆ ವಿಜಯ್ ಮಲ್ಯ ಮತ್ತಿತರರಿಗೆ ಸೇರಿದ ಆಸ್ತಿ ಮಾರಾಟದಿಂದ 792 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು. ಪೂರಕ ಅನುದಾನಗಳ ಬೇಡಿಕೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರವು ಹೆಚ್ಚುವರಿಯಾಗಿ 3.73 ಲಕ್ಷ ಕೋಟಿ ರೂ. ವ್ಯಯ ಮಾಡಲು ಅಧಿಕಾರ ನೀಡುತ್ತದೆ.
ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳ ಜೊತೆಗೂಡಿ ಕಳೆದ ಏಳು ವರ್ಷಗಳಲ್ಲಿ ಸುಮಾರು 5.49 ಲಕ್ಷ ಕೋಟಿ ರೂಪಾಯಿಯನ್ನು ವಸೂಲಿ ಮಾಡಲಾಗಿದೆ. ಆದ್ದರಿಂದ ಸುಸ್ತಿದಾರರು, ತಲೆಮರೆಸಿಕೊಂಡಿದ್ದಾರೆ. ಅವರ ಹಣವನ್ನು ವಶಕ್ಕೆ ಪಡೆದು ಸಾರ್ವಜನಿಕ ಕ್ಷೇತ್ರದ ಬ್ಯಾಂಕಿನಲ್ಲಿಟ್ಟಿದ್ದೇವೆ. ಹೀಗಾಗಿ ಬ್ಯಾಂಕುಗಳು ಈಗಲೂ ಸುರಕ್ಷಿತವಾಗಿದ್ದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಠೇವಣಿದಾರರು ಹಣ ಸುಭದ್ರವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಹಿರಂಗಪಡಿಸಿದರು.
ಇದನ್ನೂ ಓದಿ: ವಿರೋಧದ ನಡುವೆಯೂ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ವಿಧೇಯಕ 2021 ಮಂಡಿಸಿದ ಇರಾನಿ