ಜೈಪುರ: ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಇಲ್ಲಿನ ಜಾಲಾನಾ ಚಿರತೆ ಮೀಸಲು ಪ್ರದೇಶದಲ್ಲಿ ಸಫಾರಿ ಮಾಡಿ, ತಮ್ಮ ಕ್ಯಾಮೆರಾದಲ್ಲಿ ಚಿರತೆಗಳನ್ನು ಮತ್ತು ಇತರ ವನ್ಯಜೀವಿಗಳನ್ನು ಸೆರೆ ಹಿಡಿದಿದ್ದಾರೆ. ಮೊದಲು ಅವರು ಇಲ್ಲಿನ ಚಿರತೆ ರಿಸರ್ವ್ ಪಾಯಿಂಟ್‌ನಲ್ಲಿ ಸೆಲ್ಫಿ ತೆಗೆದುಕೊಂಡರು. ಬಳಿಕ ವಿವಿಧೆಡೆ ಸಫಾರಿ ಮಾಡಿ ಪ್ರಾಣಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದರು.
ಚಿರತೆ ಮೀಸಲು ಪ್ರದೇಶವಾದ ಶಿಕರ್ ಹೌಡಿಯಲ್ಲಿ ಸೈನಾ ಸಾಕಷ್ಟು ಸಮಯ ಕಳೆದರು. ಜಾಲಾನಾ ಅರಣ್ಯವನ್ನು ಅವರು ಬಹಳ ಮೆಚ್ಚಿದ್ದು, ಇದು ಅದ್ಭುತವಾದ ಪ್ರದೇಶ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ಕಾಡಿನ ವಿವಿಧ ಸ್ಥಳಗಳಲ್ಲಿ ಹಲವು ಪ್ರಾಣಿಗಳ ಫೋಟೋಗಳನ್ನು ಕ್ಲಿಕ್ಕಿಸಿದರು.
ಫೋಟೋ ಗ್ಯಾಲರಿಗೆ ಭೇಟಿ
ಸಫಾರಿ ಬಳಿಕ ಸೈನಾ ನೆಹ್ವಾಲ್ ಜಾಲಾನಾ ಚಿರತೆ ರಿಸರ್ವ್‌ನಲ್ಲಿರುವ ಫೋಟೋ ಗ್ಯಾಲರಿಗೆ ಭೇಟಿ ನೀಡಿದರು. ಅಲ್ಲಿರುವ ಎಲ್ಲ ಚಿರತೆಗಳ ಫೋಟೋಗಳನ್ನು ವೀಕ್ಷಿಸಿ, ಅವುಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದರು. ಜೈಪುರ ನಗರದ ಹೃದಯಭಾಗದಲ್ಲಿರುವ ಜಾಲಾನಾ ಚಿರತೆ ಮೀಸಲು ಪ್ರದೇಶ ಪ್ರವಾಸಿಗರನ್ನು ಆಕರ್ಷಿಸುವ ಕೇಂದ್ರವಾಗಿದೆ ಎಂದು ಹೇಳಿದರು.
ಹಲವು ಸೆಲೆಬ್ರಿಟಿಗಳ ಭೇಟಿ
ಅನೇಕ ನಟರು, ನಟಿಯರು, ನಿರ್ದೇಶಕರು ಜಾಲಾನಾ ಚಿರತೆ ಮೀಸಲು ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ. ಅಲ್ಲದೇ ದೇಶಾದ್ಯಂತ ವನ್ಯಜೀವಿ ಪ್ರಿಯರು ಕೂಡ ಇಲ್ಲಿಗೆ ಬಂದು ಚಿರತೆ ವೀಕ್ಷಣೆಯನ್ನು ಆನಂದಿಸುತ್ತಾರೆ ಎಂದು ಇಲ್ಲಿನ ಸಿಬ್ಬಂದಿ ತಿಳಿಸಿದೆ.