ಅಮೃತಸರ(ಪಂಜಾಬ್): ಕೆಲವು ದಿನಗಳ ಹಿಂದೆ ಪಾಕ್ ಮೂಲದ ದಂಪತಿ ತಮಗೆ ಜನಿಸಿದ ಗಂಡು ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟಿದ್ದು, ಆ ದಂಪತಿಗೆ ಭಾರತೀಯರು ತೋರಿದ ಪ್ರೀತಿ, ಬೆಂಬಲದ ಕಾರಣದಿಂದ ತಮ್ಮ ದೇಶವಾದ ಪಾಕಿಸ್ತಾನಕ್ಕೆ ತೆರಳಲು ಸಾಧ್ಯವಾಗಿದೆ.
ಹೌದು, ಪಾಕ್ ಮೂಲದ ಹಿಂದೂ ದಂಪತಿ ಅಮೃತಸರದ ಅಟ್ಟಾರಿ ಬಾರ್ಡರ್ ಮೂಲಕ ಅವರು ಪಾಕಿಸ್ತಾನಕ್ಕೆ ತೆರಳಿದ್ದು, ಭಾರತೀಯರು ತೋರಿದ ಕಾಳಜಿ, ಪ್ರೀತಿ ಕಾಳಜಿಗೆ ವಂದನೆಗಳನ್ನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟಿದ್ದಾರೆ.
ಸಂಪೂರ್ಣ ವಿವರ: ಪಾಕಿಸ್ತಾನದ ಹಿಂದೂ ಪ್ರಜೆಗಳು ಕೆಲವೊಂದು ಹಬ್ಬಗಳಿಗಾಗಿ, ದೇವಸ್ಥಾನಗಳಿಗೆ ಭಾರತಕ್ಕೆ ಬಂದು ಹೋಗುವುದುಂಟು. ಹೀಗೆ ಬಂದ ಪಾಕ್ ಹಿಂದೂ ದಂಪತಿ ಬಲಕ್ ರಾಮ್ ಮತ್ತು ನಿಂಬೂದೇವಿ ಎರಡನೇ ಕೊರೊನಾ ಅಲೆಗೂ ಮೊದಲೇ ಭಾರತಕ್ಕೆ ಆಗಮಿಸಿದ್ದು, ಲಾಕ್ಡೌನ್ ಕಾರಣದಿಂದ ವಾಪಸ್ ತೆರಳಲಾಗದೇ ಇಲ್ಲಿಯೇ ಸಿಲುಕಿದ್ದರು.
ಎರಡೂವರೆ ತಿಂಗಳ ನಂತರ ಲಾಕ್ಡೌನ್ ತೆರವಾದ ಬಳಿಕ ಪಾಕಿಸ್ತಾನಕ್ಕೆ ತೆರಳಲು ಅವರು ನಿರ್ಧರಿಸಿದ್ದು, ಈ ವೇಳೆ ಅಟ್ಟಾರಿ ಗಡಿಯಲ್ಲಿ ಡಿಸೆಂಬರ್ 2ರಂದು ಅವರಿಗೆ ಗಂಡು ಮಗು ಜನಿಸಿದೆ. ಆ ಮಗುವಿಗೆ ಬಾರ್ಡರ್ ಎಂದು ಪೋಷಕರು ನಾಮಕರಣ ಮಾಡಿದ್ದಾರೆ. ಆದರೆ ಮಗುವಿನ ದಾಖಲಾತಿಗಳು ಇಲ್ಲದ ಕಾರಣಕ್ಕೆ ಪಾಕ್ ಗಡಿಯಲ್ಲಿ ಅವರನ್ನು ತಡೆಯಲಾಗಿತ್ತು.
ಈ ವೇಳೆ ಎನ್ಜಿಒ ನಡೆಸುತ್ತಿದ್ದ ಅನುಜ್ ಭಂಡಾರಿ ಎಂಬಾತ ಅವರ ಸಹಾಯಕ್ಕೆ ನಿಂತಿದ್ದಾರೆ. ಮಗು ಮತ್ತು ಮಗುವಿನ ಪೋಷಕರಿಗೆ ಎಲ್ಲಾ ವಸತಿ ಊಟ ಕಲ್ಪಿಸುವುದರ ಜೊತೆಗೆ ಪಾಕ್ ಸರ್ಕಾರಕ್ಕೆ ಬೇಕಾಗಿದ್ದ ವೀಸಾ, ಮಗುವಿನ ಜನನ ಪ್ರಮಾಣಪತ್ರ ಕೂಡಾ ಮಾಡಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ. ಇದರ ಜೊತೆಗೆ ಸ್ಥಳೀಯರೂ ತಮಗಾದ ಸಹಾಯವನ್ನು ಪಾಕ್ ದಂಪತಿಗೆ ನೀಡಿದ್ದಾರೆ.
ಭಾರತೀಯರ ಸಹಾಯಕ್ಕೆ ಧನ್ಯವಾದ ಸಲ್ಲಿಸಿದ ಪಾಕ್ ದಂಪತಿ ಈಗ ತಮ್ಮ ಮಗು ಬಾರ್ಡರ್ನೊಂದಿಗೆ ತಮ್ಮ ದೇಶವನ್ನು ತಲುಪಿದ್ದಾರೆ.
ಇದನ್ನೂ ಓದಿ: ನೀರಿನ ಬಕೆಟ್ನಲ್ಲಿ ಮಗು ಮುಳುಗಿಸಿ ಕೊಂದ ತಾಯಿ: ಕೊಲೆಗೆ ವಿಚಿತ್ರ ಕಾರಣ ಕೊಟ್ಟ ಮಹಿಳೆ..!