ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಎರಡು ವರ್ಷದ ಬಾಲಕಿಗೆ ಮಂಕಿಪಾಕ್ಸ್ ಇರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ರಕ್ತ ಪರೀಕ್ಷೆ ನಡೆಸಿದಾಗ ಅದು ನೆಗೆಟಿವ್ ಎಂದು ದೃಢಪಟ್ಟಿದೆ.
ಎರಡು ವರ್ಷದ ಮಗು ದುಬೈನಿಂದ ವಿಜಯವಾಡಕ್ಕೆ ಮರಳಿದ್ದು, ಆಕೆಯ ಕೈಗಳಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದವು ಎಂದು ರಾಜ್ಯ ಆರೋಗ್ಯ ನಿರ್ದೇಶಕ ಜೆ ನಿವಾಸ್ ತಿಳಿಸಿದ್ದಾರೆ. ಆಕೆಯನ್ನು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆಯಾಗಿ ಆಕೆಯ ಕುಟುಂಬ ಸದಸ್ಯರೊಂದಿಗೆ ಪ್ರತ್ಯೇಕವಾಗಿ ಇರಿಸಲಾಗಿತ್ತು ಎಂದು ವಿವರಿಸಿದರು.
ನಾವು ಮಗುವಿನ ರಕ್ತದ ಮಾದರಿಯನ್ನು ವಿಮಾನದ ಮೂಲಕ ಎನ್ಐವಿ-ಪುಣೆಗೆ ವಿಶ್ಲೇಷಣೆಗಾಗಿ ಕಳುಹಿಸಿದ್ದೇವೆ. ಅದು ಮಂಕಿಪಾಕ್ಸ್ ಸೋಂಕು ನಕಾರಾತ್ಮಕವಾಗಿದೆ. ಮಗುವಿನ ಕುಟುಂಬವು ಬೇರೆಯವರೊಂದಿಗೆ ಸಂಪರ್ಕಕ್ಕೆ ಬಂದಿಲ್ಲ ಎಂದು ನಿವಾಸ್ ತಿಳಿಸಿದ್ದಾರೆ.
ಯುಎಇಯಿಂದ ಹಿಂದಿರುಗಿದ ಕೇರಳಿಗರೊಬ್ಬರಿಗೆ ಮಂಕಿಪಾಕ್ಸ್ ದೃಢಪಟ್ಟಿದ್ದು, ಜುಲೈ 14 ರಂದು ದೇಶವು ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ದಾಖಲಿಸಿದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಮಂಕಿಪಾಕ್ಸ್ ಒಂದು ವೈರಲ್ ಝೂನೊಸಿಸ್ (ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ವೈರಸ್) ಆಗಿದ್ದು, ಸಿಡುಬು ರೋಗಿಗಳಲ್ಲಿ ಹಿಂದೆ ಕಂಡುಬರುವ ರೋಗಲಕ್ಷಣಗಳನ್ನು ಹೋಲುತ್ತದೆಯಾದರೂ ಇದು ಪ್ರಾಯೋಗಿಕವಾಗಿ ಕಡಿಮೆ ತೀವ್ರತೆಯನ್ನು ಹೊಂದಿರುತ್ತದೆಯಂತೆ.
ಇದನ್ನೂ ಓದಿ: ಮನೆ ಕಳ್ಳತನ.. ಆರೋಪಿಗೆ ಎಂಜಲು ನೆಕ್ಕಿಸಿ ತಾಲಿಬಾನ್ ರೀತಿಯ ಶಿಕ್ಷೆ