ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ದೆಹಲಿಯ 'ಬಾಬಾ ಕಾ ಡಾಬಾ'ದ ಮಾಲೀಕ ಕಾಂತಾ ಪ್ರಸಾದ್ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ ಆಗಿದ್ದ ಬಾಬಾ ಕಾ ಡಾಬಾ ಖ್ಯಾತಿಯ ಕಾಂತಾ ಪ್ರಸಾದ್ ದಿಢೀರ್ ಆಗಿ ಜೂನ್ 18ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಹೀಗಾಗಿ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಈ ವೇಳೆ ಪೊಲೀಸರ ಮುಂದೆ ತಮ್ಮ ಹೇಳಿಕೆ ನೀಡಿರುವ ಕಾಂತಾ ಪ್ರಸಾದ್, YouTubers ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರ ಒತ್ತಡದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಯಾವ ಕಾರಣಕ್ಕಾಗಿ ಆತ್ಮಹತ್ಯೆ ಯತ್ನ?
ಯೂಟ್ಯೂಬರ್ ಗೌರವ್ ವಾಸನ್ಗೆ ಕ್ಷಮೆಯಾಚನೆ ಮಾಡುವಂತೆ ಅನೇಕ ಯೂಟ್ಯೂಬರ್ಗಳು ತಮ್ಮ ಮೇಲೆ ಒತ್ತಡ ಹಾಕಿದ್ದರಿಂದ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದಾರೆ. ಮೇಲಿಂದ ಮೇಲೆ ತಮ್ಮ ಮೇಲೆ ಯೂಟ್ಯೂಬರ್ಗಳು ಒತ್ತಡ ಹಾಕಲು ಶುರು ಮಾಡಿದ್ದರಿಂದ ತಾವು ಖಿನ್ನತೆಗೊಳಗಾಗಿದ್ದಾಗಿ ಹೇಳಿದ್ದಾರೆ. ಕಾಂತಾ ಪ್ರಸಾದ್ಗೆ ಕರೆ ಮಾಡಿರುವ ಯೂಟ್ಯೂಬರ್ಗಳ ಬಗ್ಗೆ ಇದೀಗ ಪೊಲೀಸರು ತನಿಖೆ ನಡೆಸಲು ಮುಂದಾಗಿದ್ದಾರೆ.
ಇದನ್ನೂ ಓದಿರಿ: ಆತ್ಮಹತ್ಯೆಗೆ ಯತ್ನಿಸಿದ 'Baba Ka Dhaba' ಮಾಲೀಕ : ಆಸ್ಪತ್ರೆಗೆ ದಾಖಲು
ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಾಗಿದ್ದ ಕಾಂತಾ ಪ್ರಸಾದ್, ಮದ್ಯ ಸೇವನೆ ಹಾಗೂ ನಿದ್ರೆ ಬರುವ ಮಾತ್ರೆ ತೆಗೆದುಕೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ಸಹ ದಾಖಲಾಗಿತ್ತು.