ಲಖನೌ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವು 2024ರ ಲೋಕಸಭಾ ಚುನಾವಣೆಗೆ ಮುನ್ನ ಪೂರ್ಣಗೊಳ್ಳುವ ಹಂತದಲ್ಲಿದೆ. 2023ರ ಡಿಸೆಂಬರ್ನಲ್ಲಿ ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದರು.
ರಾಮಮಂದಿರಕ್ಕೆ ಮೊದಲ ಹಂತದ ಅಡಿಪಾಯವನ್ನು ಸೆಪ್ಟೆಂಬರ್‌ನಲ್ಲಿಯೇ ಪೂರ್ಣಗೊಳಿಸಲಾಗಿದೆ ಮತ್ತು ಎರಡನೇ ಹಂತದ ಅಡಿಪಾಯದ ಕೆಲಸವನ್ನು ನವೆಂಬರ್ 15ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸದ್ಯಕ್ಕೆ ಕಾಂಕ್ರಿಟ್ ಹಾಕುವ ಕೆಲಸ ನಡೆಯುತ್ತಿದೆ. ಕಾಂಕ್ರಿಟ್ ಹಾಕಲು ಕೇವಲ 23 ರಿಂದ 25 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬೇಕು. ಇದೇ ಕಾರಣದಿಂದ ಕೇವಲ ರಾತ್ರಿ ಮಾತ್ರ ಈ ಕೆಲಸ ಮಾಡಲಾಗುತ್ತದೆ. ಅದರೂ ಒಂದು ವೇಳೆ ತಾಪಮಾನ ಏರಿಕೆಯಾದರೆ ಕಾಂಕ್ರಿಟ್ಗೆ ಐಸ್ ಸೇರಿಸಲಾಗುತ್ತದೆ ಎಂದು ಅವರು ವಿವರಿಸಿದರು.
ದೇವಾಲಯದ ಆಧಾರಸ್ತಂಭವನ್ನು ಮಿರ್ಜಾಪುರದಿಂದ ತರಿಸಲಾದ 4 ಲಕ್ಷ ಕಲ್ಲುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಇದರ ಜೊತೆಗೆ ದೇವಾಲಯದ ನಿರ್ಮಾಣಕ್ಕೆ ರಾಜಸ್ಥಾನದ ಬನ್ಶಿಪಹರ್ಪುರದಿಂದ ಕಲ್ಲುಗಳನ್ನು ತರಿಸಿಕೊಳ್ಳಲಾಗುತ್ತಿದೆ.
2023ರ ಡಿಸೆಂಬರ್ ವೇಳೆಗೆ ದೇವಾಲಯದಲ್ಲಿ ರಾಮನ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿ, ಭಕ್ತರಿಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ರೈ ಹೇಳಿದರು. 2024ರ ಲೋಕಸಭಾ ಚುನಾವಣೆಯ ಮೇಲೆ ರಾಮಮಂದಿರ ನಿರ್ಮಾಣ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ವ್ಯಕ್ತಿಯೊಬ್ಬರಿಗೆ ಬಂಗಲೆಯಲ್ಲಿ ಹಿಗ್ಗಾಮುಗ್ಗಾ ಥಳಿಸಿದ ಮಹಾ ಸರ್ಕಾರದ ಸಚಿವರಿಗೆ ಜಾಮೀನು