ದರ್ಭಾಂಗ್ (ಬಿಹಾರ): ಬಿಹಾರದ ದರ್ಭಾಂಗದಲ್ಲಿ ದುಷ್ಕರ್ಮಿಗಳು ಮೊರೊ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಆದರೆ, ಎಲ್ಲ ಪೊಲೀಸ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ನಗರ ಪೊಲೀಸ್ ವರಿಷ್ಠಾಧಿಕಾರಿ ಸಾಗರ್ ಕುಮಾರ್ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಸಿಸಿಟಿವಿ ಕ್ಯಾಮರಾ ದೃಶ್ಯಗಳಲ್ಲಿ ವ್ಯಕ್ತಿಯೊಬ್ಬರು ಆಕ್ಷೇಪಾರ್ಹ ವಸ್ತುಗಳನ್ನು ಹೊತ್ತುಕೊಂಡು ಠಾಣೆಯ ಆವರಣಕ್ಕೆ ಬರುತ್ತಿರುವುದು ಕಂಡುಬಂದಿದೆ ಎಂದು ನಗರ ಎಸ್ಪಿ ತಿಳಿಸಿದ್ದಾರೆ.
ಆರೋಪಿ ಧರ್ಮೇಂದ್ರ ಠಾಕೂರ್ ಬಂಧನ: "ಸಿಸಿಟಿವಿ ಕ್ಯಾಮರಾದಲ್ಲಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ, ಒಬ್ಬ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆ ಆರೋಪಿಯನ್ನು ಬಂಧಿಸಲಾಗಿದೆ. ಕಪರ್ಪುರ ನಿವಾಸಿ ಧರ್ಮೇಂದ್ರ ಠಾಕೂರ್ ಬಂಧಿತ ಆರೋಪಿ. ಧರ್ಮೇಂದ್ರ ಠಾಕೂರ್ ಗೆ ಮೂವರು ಸಹೋದರರಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಯಾವುದೋ ವಿಚಾರಕ್ಕೆ ಅವರ ಮಧ್ಯೆ ಜಗಳ ನಡೆದಿದೆ. ಈ ಪೈಕಿ ಒಬ್ಬ ಸಹೋದರ ನಿನ್ನೆ ಪ್ರಕರಣ ದಾಖಲಿಸಲು ಠಾಣೆಗೆ ಬಂದಿದ್ದ.
ಈ ವಿಷಯ ತಿಳಿದ ಕೂಡಲೇ ಧರ್ಮೇಂದ್ರ ತನ್ನ ಸಹೋದರನನ್ನು ತಡೆಯಲು ಕೋಲು ಹಿಡಿದು ಪೊಲೀಸ್ ಠಾಣೆ ತಲುಪಿದ್ದನು. ವಿಚಾರಣೆ ವೇಳೆ ಅರುಣ್ ಯಾದವ್ ಹೆಸರನ್ನು ಧರ್ಮೇಂದ್ರ ಬಹಿರಂಗಪಡಿಸಿದ್ದಾನೆ. ಧರ್ಮೇಂದ್ರ ಕೆಲ ಕಾಲ ಪೊಲೀಸ್ ಠಾಣೆಯಲ್ಲಿ ಅಣ್ಣನಿಗಾಗಿ ಹುಡುಕಾಟ ನಡೆಸಿದ್ದ. ಬಳಿಕ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ ಡೀಸೆಲ್‌ಗೆ ಬೆಂಕಿ ಹಚ್ಚಲು ಯತ್ನಿಸಿದ್ದನು. ಆದರೆ, ಅಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯು ಆರೋಪಿಯ ಕೃತ್ಯವನ್ನು ತಡೆದಿದ್ದಾರೆ'' ಎಂದು ದರ್ಭಾಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ದರ್ಭಾಂಗ್ ನಗರ ಎಸ್ಪಿ ಸಾಗರ್ ಕುಮಾರ್ ಮಾಹಿತಿ: ದರ್ಭಾಂಗ್ ನಗರ ಎಸ್ಪಿ ಸಾಗರ್ ಕುಮಾರ್ ಮಾತನಾಡಿ, ''ಭಾನುವಾರ ಮಧ್ಯರಾತ್ರಿ ಮೋರೊ ಪೊಲೀಸ್ ಠಾಣೆಯ ಆವರಣವನ್ನು ದುಷ್ಕರ್ಮಿಗಳು ಠಾಣೆಯನ್ನು ಸುಡುವ ಯತ್ನ ನಡೆದಿರುವ ಬಗ್ಗೆ ಮಾಹಿತಿ ಬಂದಿದೆ. ಪೊಲೀಸ್ ಠಾಣೆಯ ಮೀಸಲು ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಈ ಕೃತ್ಯವನ್ನು ನಿಲ್ಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
''ಮೊರೊ ಪೊಲೀಸ್ ಠಾಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಯಾರದೇ ನಿರ್ಲಕ್ಷ್ಯ ಕಂಡು ಬಂದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು'' ಎಂದು ದರ್ಭಾಂಗ್ ನಗರ ಎಸ್ಪಿ ತಿಳಿಸಿದ್ದಾರೆ.
''ಮಧ್ಯರಾತ್ರಿ ಪೊಲೀಸ್ ಠಾಣೆಯ ಆವರಣಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿಸಿರುವ ಬಗ್ಗೆ ಮೊರೊ ಠಾಣಾ ಸಿಬ್ಬಂದಿಯಿಂದ ಮಾಹಿತಿ ಬಂದಿದ್ದು, ಮೀಸಲು ಪಡೆ ಸಿಬ್ಬಂದಿಯ ಕ್ರಿಯಾಶೀಲತೆಯಿಂದ ಭಾರಿ ಅನಾಹುತ ತಪ್ಪಿದೆ. ಆರೋಪಿಗಳ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು" ಎಂದು ದರ್ಭಾಂಗ್ ನಗರ ಎಸ್ಪಿ ಸಾಗರ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಮುಂಬೈ ಡಿಸಿಪಿ ಹೆಸರಿನಲ್ಲಿ ಹುಬ್ಬಳ್ಳಿ ವೈದ್ಯನಿಗೆ ₹ 30 ಲಕ್ಷ ವಂಚನೆ