ದರ್ಭಂಗಾ(ಬಿಹಾರ): ಜಮೀನು ವಿವಾದದ ಹಿನ್ನೆಲೆಯಲ್ಲಿ ಗಲಾಟೆ ನಡೆದು ಸುಮಾರು 25 ರಿಂದ 30 ಮಂದಿ ಒಂದೇ ಕುಟುಂಬದ ಮೂವರನ್ನು ಜೀವಂತವಾಗಿ ಸುಡಲು ಯತ್ನಿಸಿರುವ ಘಟನೆ ಬಿಹಾರದ ದರ್ಭಂಗಾದಲ್ಲಿ ನಡೆದಿದೆ. ಈ ಘಟನೆಯಲ್ಲಿ ಗರ್ಭಿಣಿ ಸೇರಿದಂತೆ ಮೂವರಿಗೆ ಸುಟ್ಟ ಗಾಯವಾಗಿದ್ದ, ಚಿಕಿತ್ಸೆ ನೀಡಲಾಗುತ್ತಿದೆ.
ದರ್ಭಾಂಗದ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಿಎಂ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೊದಲಿಗೆ ಜೆಸಿಬಿ ತಂದ ದುಷ್ಕರ್ಮಿಗಳು ಮನೆಯನ್ನು ಕೆಡವಲು ಯತ್ನಿಸಿದ್ದಾರೆ. ಇದಕ್ಕೆ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ ಕಾರಣದಿಂದ ಮನೆಗೆ ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ ಮೂವರಿಗೆ ಸುಟ್ಟ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಡಿಸಿಎಂಎಚ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಮನೆಯ ಸಿಸಿ ಕ್ಯಾಮರಾದಲ್ಲಿಯೂ ಘಟನೆ ಸೆರೆಯಾಗಿದೆ. ಕೆಲವರು ಮನೆಗೆ ಬೆಂಕಿ ಹಚ್ಚುವುದು, ಬೆಂಕಿಯ ಜ್ವಾಲೆ, ಕೆಲವರು ಸುಟ್ಟಗಾಯದಿಂದ ನರಳುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಪೊಲೀಸರ ಸಮ್ಮುಖದಲ್ಲೇ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗುತ್ತಿದೆ.
ಘಟನೆ ವೇಳೆ, ಕುಟುಂಬದವರ ಕಿರುಚಾಟ ನಡೆದಾಗ, ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ, ಕುಟುಂಬದವರ ನೆರವಿಗೆ ನಿಂತಿದ್ದಾರೆ. ಜೆಸಿಬಿ ತಂದಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಳ್ಳಾರಿ ವ್ಯಕ್ತಿಗೆ ಕೇರಳದ ಯುವಕನ ಕೈಗಳ ಜೋಡಣೆ; ಕಳೆದುಕೊಂಡ ಜಾಗದಲ್ಲಿ ಹೊಸ ಜೀವನ ಆರಂಭ
ಘಟನೆಯ ಮಾಹಿತಿ ಮೇರೆಗೆ ಎಸ್‌ಎಚ್‌ಒ ರಾಕೇಶ್ ಕುಮಾರ್ ಸಿಂಗ್ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ. ಬಾಲಕಿ ನಿಕ್ಕಿ ಈ ಕುರಿತು ಮಾತನಾಡಿದ್ದು, ಈಗಾಗಲೇ ತನ್ನ ಜಮೀನು ವಿವಾದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೂ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾಳೆ.