ಬರ್ನಾಲಾ(ಪಂಜಾಬ್): ಮಕ್ಕಳಿದ್ದ ಶಾಲಾ ಬಸ್ ಮೇಲೆ ದ್ವಿಚಕ್ರವಾಹನ ಸವಾರರು ಹರಿತವಾದ ಆಯುಧಗಳಿಂದ ದಾಳಿ ನಡೆಸಿದ ಘಟನೆ ಬರ್ನಾಲಾದಲ್ಲಿ ನಡೆದಿದೆ. ದುಷ್ಕರ್ಮಿಗಳು ಮೊದಲು ಬಸ್ ಚಾಲಕನ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಚಾಲಕ ಧೈರ್ಯ ಮತ್ತು ಬುದ್ದಿವಂತಿಕೆ ಪ್ರದರ್ಶಿಸಿ ಸ್ಥಳದಿಂದ ವೇಗವಾಗಿ ಬಸ್ ಅನ್ನು ಹತ್ತಿರದ ಡಿಎಸ್ಪಿ ಕಚೇರಿಗೆ ಕೊಂಡೊಯ್ದಿದ್ದಾನೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
ದಾಳಿಯಲ್ಲಿ ಶಾಲಾ ಮಕ್ಕಳು ಸುರಕ್ಷಿತವಾಗಿದ್ದು, ಚಾಲಕ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬರ್ನಾಲಾ ಪೊಲೀಸರು ತನಿಖೆ ಆರಂಭಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ದಾಳಿಯ ಬಗ್ಗೆ ಬಸ್ ಚಾಲಕ ಮಾಹಿತಿ ನೀಡಿದ್ದು, ಬಸ್ನಲ್ಲಿ 35 ಮಕ್ಕಳಿದ್ದು, ಶಾಲೆಯಿಂದ ಕರೆತರುತ್ತಿತ್ತು. ಅಷ್ಟರಲ್ಲಿ ಕೆಲವು ಹುಡುಗರು ಬಸ್ ತಡೆದು ಕೆಳಗಿಳಿಯುವಂತೆ ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬರ್ನಾಲಾ ಡಿಎಸ್ಪಿ ಸತ್ವಿರ್ ಸಿಂಗ್, ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದ್ದು, ಚಾಲಕನನ್ನು ವಿಚಾರಣೆ ನಡೆಸಲಾಗುತ್ತಿದೆ. ಚಾಲಕನಿಗೆ ದುಷ್ಕರ್ಮಿಗಳೊಂದಿಗೆ ಹಳೆ ದ್ವೇಷವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅದಕ್ಕಾಗಿಯೇ ಈ ದಾಳಿ ನಡೆಸಿದ್ದಾರೆ ಎನ್ನಲಾಗ್ತಿದೆ. ದಾಳಿಕೋರರಲ್ಲಿ ಕೆಲವರನ್ನು ಗುರುತಿಸಲಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರರ ಅಡಗುತಾಣ ದ್ವಂಸಗೊಳಿಸಿದ ಸೇನೆ.. ಭಯೋತ್ಪಾದಕರು ಎಸ್ಕೇಪ್, ಶಸ್ತ್ರಾಸ್ತ್ರ ವಶ