ಕೋಲ್ಕತ್ತಾ/ಗುವಾಹಟಿ: ಅಸ್ಸೋಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ಸಂಜೆ 5 ಗಂಟೆಯ ವೇಳೆಗೆ ಕ್ರಮವಾಗಿ ಶೇ 71.62 ಮತ್ತು ಶೇ 77.99ರಷ್ಟು ದಾಖಲಾಗಿದೆ.
ಪಶ್ಚಿಮ ಬಂಗಾಳ ಹಾಗೂ ಅಸ್ಸೋಂ ರಾಜ್ಯಗಳಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆಯು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಪಶ್ಚಿಮ ಬಂಗಾಳದಲ್ಲಿ ಶೇ.77.99ರಷ್ಟು ಹಾಗೂ ಅಸ್ಸೋಂನಲ್ಲಿ ಶೇ 71.62ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಇಂದಿನಿಂದ ಏಪ್ರಿಲ್ 29 ರವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಇಂದು ಮೊದಲ ಹಂತದಲ್ಲಿ 30 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದ್ದು, 191 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ. ಸುಮಾರು 73 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಹೆಚ್ಚಿನ ಓದಿಗೆ: ಪಶ್ಚಿಮ ಬಂಗಾಳ; ಚುನಾವಣಾ ಕಾರ್ಯ ನಿರತ ಬಸ್ಗೆ ಬೆಂಕಿ.. ವಿಡಿಯೋ
ಅಸ್ಸೋಂನಲ್ಲಿ ಇಂದಿನಿಂದ ಏಪ್ರಿಲ್ 6ರವರೆಗೆ ಮೂರು ಹಂತಗಳಲ್ಲಿ 126 ಕ್ಷೇತ್ರಗಳಿಗೆ ಎಲೆಕ್ಷನ್ ನಡೆಯಲಿದೆ. ಇಂದು ಮೊದಲ ಹಂತದಲ್ಲಿ 47 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 264 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಮೊದಲ ಹಂತದಲ್ಲಿ 40,32,841 ಮಹಿಳಾ ಮತದಾರರು ಸೇರಿದಂತೆ ಒಟ್ಟು 81,09,815 ಮತದಾರರು ರಾಜ್ಯದ 12 ಜಿಲ್ಲೆಗಳಲ್ಲಿರುವ 11,570ಕ್ಕೂ ಹೆಚ್ಚು ಮತದಾನ ಕೇಂದ್ರಗಳಲ್ಲಿ ವೋಟ್ ಮಾಡಲಿದ್ದಾರೆ. ಏಪ್ರಿಲ್ 1 ರಂದು ಎರಡನೇ ಹಂತದಲ್ಲಿ 39 ಕ್ಷೇತ್ರಗಳಿಗೆ ಹಾಗೂ ಏಪ್ರಿಲ್ 6 ರಂದು ಮೂರನೇ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.