ಕೋಲ್ಕತ್ತಾ/ಗುವಾಹಟಿ: ಪಂಚರಾಜ್ಯ ಚುನಾವಣೆಗಳ ಪೈಕಿ ಪಶ್ಚಿಮ ಬಂಗಾಳ ಹಾಗೂ ಅಸ್ಸೋಂನಲ್ಲಿ ಇಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆದಿದ್ದು, ಸಂಜೆ 7 ಗಂಟೆವರೆಗೆ ದಾಖಲೆಯ ಪ್ರಮಾಣದಲ್ಲಿ ವೋಟಿಂಗ್ ಆಗಿದೆ.
ಕೇಂದ್ರ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಅಸ್ಸೋಂನಲ್ಲಿ ಶೇ. 74 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ.81 ರಷ್ಟು ವೋಟಿಂಗ್ ಆಗಿದೆ. ಪ್ರಮುಖವಾಗಿ ಕಾಟ್ಲಾಪುರದಲ್ಲಿ ಶೇ. 87.21, ನಂದಿಗ್ರಾಮದಲ್ಲಿ ಶೇ. 80.79ರಷ್ಟು ಮತದಾನವಾಗಿದೆ.
ಇದನ್ನೂ ಓದಿ: ಸ್ಥಳೀಯರಿಗೆ ವೋಟ್ ಮಾಡಲು ಅವಕಾಶ ನೀಡ್ತಿಲ್ಲ: ರಾಜ್ಯಪಾಲರಿಗೆ ಫೋನಾಯಿಸಿದ ಮಮತಾ
ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದಲ್ಲಿ 30 ಕ್ಷೇತ್ರಗಳ 171 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಿದೆ. ಅಸ್ಸೋಂನಲ್ಲಿ 39 ಕ್ಷೇತ್ರಗಳಲ್ಲಿ 354 ಸ್ಪರ್ಧಿಗಳು ಕಣದಲ್ಲಿದ್ದಾರೆ. ಪ್ರಮುಖವಾಗಿ ಪಶ್ಚಿಮ ಬಂಗಾಳದ ನಂದಿಗ್ರಾಮ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಟಿಎಂಸಿಯಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿಯಿಂದ ಸುವೇಂದು ಅಧಿಕಾರಿ ಕಣಕ್ಕಿಳಿದಿದ್ದಾರೆ.
ಮಮತಾ ವಿರುದ್ಧ ದೂರು ದಾಖಲು
ನಂದಿಗ್ರಾಮದಲ್ಲಿ ಸ್ಥಳೀಯರಿಗೆ ವೋಟ್ ಮಾಡಲು ಅವಕಾಶ ನೀಡುತ್ತಿಲ್ಲ. ಇಲ್ಲಿ ಉತ್ತರ ಪ್ರದೇಶ, ಬಿಹಾರದಿಂದ ಗೂಂಡಾಗಳನ್ನು ಕರೆತಂದು ದಾಂಧಲೆ ಮಾಡಿಸಲಾಗುತ್ತಿದ್ದು, ಮತದಾರರನ್ನು ಹೆದರಿಸಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು. ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ.
ಚು. ಆಯೋಗದ ವಿರುದ್ಧ ದೀದಿ ಆಕ್ರೋಶ
ನಂದಿಗ್ರಾಮ ಕ್ಷೇತ್ರಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ ಘಟನೆ ಸಹ ನಡೆದಿದೆ. ಅಕ್ರಮವಾಗಿ ನಡೆಯುತ್ತಿರುವ ಮತದಾನದ ಬಗ್ಗೆ ಈಗಾಗಲೇ ಅನೇಕ ಬಾರಿ ದೂರು ನೀಡಿದ್ರೂ ಆಯೋಗ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು.