ತಿರುವನಂತಪುರಂ: ಕೇರಳ ವಿಧಾನಸಭೆಯನ್ನು ಮಹಿಳೆಯರ ನಿಂದಿಸುವ ಕೌರವರ ಸಭೆಯನ್ನಾಗಿ ಮಾಡಬೇಡಿ ಎಂದು ಸದನದಲ್ಲಿ ಕೇರಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಮಹಿಳಾ ಶಾಸಕಿಯೊಬ್ಬರ ವಿರುದ್ಧ ಸಿಪಿಐ (ಎಂ) ಶಾಸಕರೊಬ್ಬರು ಮಾಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ.
ಆರ್‌ಎಂಪಿ ಶಾಸಕಿ ರೇಮಾ ಅವರ ವಿರುದ್ಧ ನೀಡಲಾದ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆಯುವಂತೆ ನಾವು ಮೊದಲಿಗೆ ಮಣಿ ಅವರಿಗೆ ಕೇಳಿಕೊಂಡಿದ್ದೆವು. ನಂತರ ಈ ಬಗ್ಗೆ ಮಣಿಯವರಿಗೆ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೂ ಮನವಿ ಮಾಡಿದ್ದೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕರಾಗಿರುವ ವಿ.ಡಿ.ಸತೀಶನ್ ಹೇಳಿದರು.
ಆದರೆ ಇಬ್ಬರಲ್ಲಿ ಯಾರೊಬ್ಬರೂ ನಮ್ಮ ಬೇಡಿಕೆಗೆ ಸಮ್ಮತಿಸಲು ತಯಾರಿಲ್ಲ. ಇಂಥ ಪರಿಸ್ಥಿತಿಯಲ್ಲಿ ಎರಡು ಮುಖ್ಯ ಪ್ರಶ್ನೆಗಳು ಉದ್ಭವಿಸುತ್ತವೆ- ಮೊದಲನೆಯದಾಗಿ ವಿಧವೆಯಾಗುವುದು ಮಹಿಳೆಯೊಬ್ಬಳ ಹಣೆಬರಹವೇ, ಎರಡನೆಯದಾಗಿ, ಕೇರಳ ವಿಧಾನಸಭೆಯು ಮಹಿಳೆಯರನ್ನು ನಿಂದಿಸುವ ಕೌರವರ ಸಭೆಯಾಗಿದೆಯೇ ಎಂದು ಸತೀಶನ್ ವಾಗ್ದಾಳಿ ನಡೆಸಿದರು. ಕೇರಳದಂಥ ಪ್ರಗತಿಪರ ರಾಜ್ಯವು ವಿಧವೆಯಾಗುವುದು ಮಹಿಳೆಯೊಬ್ಬಳ ಹಣೆಬರಹ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸತೀಶನ್ ಹೇಳಿದರು.
"ಇದು ನಿಯಮಸಭೆ (ವಿಧಾನ ಸಭೆ), ಇದನ್ನು 'ಕೌರವ ಸಭೆ' ಆಗಿ ಪರಿವರ್ತಿಸಲು ಬಿಡಬೇಡಿ. ಸಿಪಿಐ (ಎಂ) ಶಾಸಕ ಮಣಿ ಅವರ ಟೀಕೆಗಳನ್ನು ಸದನದ ದಾಖಲೆಗಳಿಂದ ತೆಗೆದುಹಾಕುವಂತೆ ನಾವು ಅಧ್ಯಕ್ಷರನ್ನು ಒತ್ತಾಯಿಸುತ್ತೇವೆ" ಎಂದು ಸತೀಶನ್ ತಿಳಿಸಿದರು. ಪ್ರತಿಪಕ್ಷಗಳ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಉಪಸಭಾಪತಿ ಚಿಟ್ಟಾಯಂ ಗೋಪಕುಮಾರ್ ತಿಳಿಸಿದರು.
ಶಾಸಕ ಮಣಿ ಅವರು ರೇಮಾ ವಿರುದ್ಧ ನೀಡಿದ ವಿವಾದಾತ್ಮಕ "ಅದು ಅವರ ಹಣೆಬರಹ" ಹೇಳಿಕೆಯು ಕಳೆದ ವಾರ ಕೇರಳ ಅಸೆಂಬ್ಲಿಯಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ಪ್ರತಿಪಕ್ಷ ಯುಡಿಎಫ್ ಸದಸ್ಯರ ಪ್ರತಿಭಟನೆಯಿಂದಾಗಿ ಜುಲೈ 15 ರಂದು ಸದನದ ಕಲಾಪವನ್ನು ರದ್ದುಗೊಳಿಸಲಾಗಿತ್ತು.
ಶ್ರೀಮತಿ ರೇಮಾ ಅವರ ಪತಿ, ಸಿಪಿಐ (ಎಂ) ಬಂಡಾಯಗಾರ ಟಿಪಿ ಚಂದ್ರಶೇಖರನ್ ಅವರು ರೆವಲ್ಯೂಷನರಿ ಮಾರ್ಕ್ಸ್‌ವಾದಿ ಪಕ್ಷ (ಆರ್‌ಎಂಪಿ) ಎಂಬ ಸಮಾನಾಂತರ ಎಡ ಸಂಘಟನೆಯನ್ನು ಆರಂಭಿಸಿದ ನಂತರ ಅವರನ್ನು ಹತ್ಯೆ ಮಾಡಲಾಗಿತ್ತು.